ಉಡುಪಿ: ಕೊಂಕಣ ರೈಲ್ವೆ ಮಾರ್ಗದ ಹಳಿಯಲ್ಲಿ ಟ್ರ್ಯಾಕ್ ನಿರ್ವಾಹಕ ಪ್ರದೀಪ್ ಶೆಟ್ಟಿ ಎಂಬುವರು ಭಾರೀ ಲೋಪವನ್ನು ಪತ್ತೆ ಹಚ್ಚಿದ ಪರಿಣಾಮ ಸಂಭಾವ್ಯ ರೈಲು ದುರಂತವೊಂದು ತಪ್ಪಿದೆ.
ಭಾನುವಾರ ಮಧ್ಯ ರಾತ್ರಿ 2.25 ಸುಮಾರಿಗೆ ಉಡುಪಿ ಸಮೀಪದ ಇನ್ನಂಜೆ ಮತ್ತು ಪಡುಬಿದ್ರಿ ಮಾರ್ಗದ ನಡುವೆ ಹಳಿ ಜಾರಿರುವುದನ್ನು ಶೆಟ್ಟಿ ಅವರು ಪತ್ತೆ ಮಾಡಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಟ್ರ್ಯಾಕ್ ದೋಷದ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಈ ಮಾರ್ಗದ ರೈಲುಗಳನ್ನು ತಡೆ ಹಿಡಿದಿದ್ದಾರೆ. ಬಳಿಕ ರೈಲ್ವೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ದೋಷವನ್ನು ತ್ವರಿತವಾಗಿ ಸರಿಪಡಿಸಿದ್ದಾರೆ. ಬೆಳಗ್ಗೆ 5.58ರ ಹೊತ್ತಿಗೆ 20 ಕಿ.ಮೀ ವೇಗದ ನಿರ್ಬಂಧದೊಂದಿಗೆ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‌ನ (ಕೆಆರ್‌ಸಿಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ, ಶೆಟ್ಟಿ ಅವರ ಕಾರ್ಯಕ್ಕೆ 25,000 ರೂಪಾಯಿ ನಗದು ಬಹುಮಾನವನ್ನು ಘೋಷಿಸಿದರು. ನಂತರ ಮರುಸ್ಥಾಪಿತ ಟ್ರ್ಯಾಕ್ ಸೈಟ್‌ನಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಾರವಾರಕ್ಕೆ ಹೋಗುವ ಪಂಚಗಂಗಾ ಎಕ್ಸ್‌ಪ್ರೆಸ್‌ನಲ್ಲಿದ್ದ ಪ್ರಯಾಣಿಕ ವಿಶಾಲ್ ಶೆಣೈ, ಪಡುಬಿದ್ರಿಯಿಂದ ದಕ್ಷಿಣಕ್ಕೆ ಸುಮಾರು 9 ಕಿ.ಮೀ. ದೂರದಲ್ಲಿರುವ ನಂದಿಕೂರು ನಿಲ್ದಾಣದಲ್ಲಿ ರೈಲನ್ನು ತಡೆಹಿಡಿಯಲಾಗಿದೆ ಎಂದು ವಿವರಿಸಿದ್ದಾರೆ. ಅದೇ ಸಮಯದಲ್ಲಿ, ತಿರುವನಂತಪುರಂ ಸೆಂಟ್ರಲ್‌ಗೆ ಹೋಗುವ ನೇತ್ರಾವತಿ ಎಕ್ಸ್‌ಪ್ರೆಸ್ ಅನ್ನು ಇನ್ನಂಜೆಯಲ್ಲಿ ತಡೆಯಲಾಗಿತ್ತು.
ಹಳಿ ದೋಷವನ್ನು ಸರಿಪಡಿಸುವವರೆಗೂ ಎರಡೂ ರೈಲುಗಳನ್ನು ತಡೆಹಿಡಿಯಲಾಗಿತ್ತು. ಆದರೆ, ಹಳಿ ದೋಷಕ್ಕೆ ಕಾರಣವನ್ನು ಕೊಂಕಣ ರೈಲ್ವೆ ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ತುರ್ತಾಗಿ ರೈಲಿನಲ್ಲಿ ಸಂಚರಿಸಬೇಕೇ? ರೈಲು ಹೊರಡುವ 5 ನಿಮಿಷ ಮುನ್ನ ಟಿಕೆಟ್ ಬುಕ್ ಮಾಡಬಹುದು! - Train Ticket Booking