ಹುಬ್ಬಳ್ಳಿ: ಹೆಸರುಕಾಳು ದರ ಕುಸಿತದಿಂದ ಹೆಸರು ಬೆಳೆದ ರೈತರು ಕಂಗಾಲಾಗಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಈ ವರ್ಷ 94.806 ಹೆಕ್ಟೇರ್ ಪ್ರದೇಶದಲ್ಲಿ ಹೆಸರುಕಾಳು ಬಿತ್ತನೆ ಮಾಡಲಾಗಿದೆ. ಈ ಪೈಕಿ ಶೇ.32ರಷ್ಟು ಹೆಸರುಕಾಳು ರೈತರ ಕೈ ಸೇರಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ರೈತರು, ಬೆಂಬಲ ಬೆಲೆಯೊಂದಿಗೆ ಹೆಸರುಕಾಳು ಮಾರಾಟ ಮಾಡಲು ಯೋಚಿಸುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯದೇ ಇರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ರೈತರು ಒಂದು ಎಕರೆಗೆ ಕನಿಷ್ಠ 10 ಸಾವಿರದಿಂದ 12 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಸತತ ಮಳೆ ಸುರಿಯುತ್ತಿರುವುದರಿಂದ ಹೆಸರುಕಾಳಿಗೆ ರೋಗ ಕಾಡುತ್ತಿದ್ದು, ಇಳುವರಿ ಕುಠಿತವಾಗಿದೆ. ಇದರ ನಡುವೆ ಹೆಸರುಕಾಳಿನ ದರ ದಿಢೀರ್ ಕುಸಿತವಾಗಿದೆ.
ಮೊದಲು ಕ್ವಿಂಟಲ್ 8,300ರಿಂದ 8,700 ರೂ. ವರೆಗೆ ಮಾರಾಟವಾಗುತ್ತಿತ್ತು. ಕೈಯಿಂದ ಬಿಡಿಸಿದ ಹೆಸರುಕಾಳಿಗೆ ಹೆಚ್ಚು ಬೇಡಿಕೆ ಇತ್ತು. ಮಷಿನ್ ಕಟಿಂಗ್ ಮಾಡಿದ ಹೆಸರುಕಾಳು, ಕೈಯಿಂದ ಬಿಡಿಸಿದ ಹೆಸರುಕಾಳಿಗಿಂತ ಒಂದು ಸಾವಿರ ರೂ. ಕಡಿಮೆ ದರದಲ್ಲಿ ಮಾರಾಟವಾಗುತ್ತಿತ್ತು. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್ 3500 ರಿಂದ 4000 ರೂಪಾಯಿಗೆ ಕುಸಿದಿದೆ.
ಈ ಕುರಿತು ರೈತ ಬಸವರಾಜ್ ಯೋಗಪ್ಪನವರ್ ಮಾತನಾಡಿ, "ಹುಬ್ಬಳ್ಳಿ ಹಾಗೂ ಗದದ ಎಪಿಎಂಸಿಯಲ್ಲಿ ದಲ್ಲಾಳಿಗಳು ಬಾಯಿಗೆ ಬಂದಹಾಗೆ ದರ ಕೇಳುತ್ತಿದ್ದಾರೆ. ರೈತನ ಪರಿಸ್ಥಿತಿ ಬಹಳ ಶೋಚನೀಯವಾಗಿದೆ. ಎಕರೆಗೆ 1 ರಿಂದ 2 ಚೀಲ ಮಾತ್ರ ಹೆಸರುಕಾಳು ಫಸಲು ಬಂದಿವೆ. ಮೊದಲೇ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆಯಲಾಗಿದೆ. ಆದರೆ ಸರ್ಕಾರಗಳು ಘೋಷಣೆ ಮಾಡಿರುವ ಬೆಂಬಲ ಬೆಲೆ ಮಾತ್ರ ರೈತನಿಗೆ ತಲುಪುತ್ತಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ 3500 ರಿಂದ 4000 ರೂಪಾಯಿ ಕೇಳುತ್ತಿದ್ದಾರೆ. ಸರ್ಕಾರ ಘೋಷಣೆ ಮಾಡಿದಂತೆ ಖರೀದಿ ಕೇಂದ್ರವನ್ನು ಸ್ಥಾಪಿಸಬೇಕು. ರೈತನನ್ನು ಉಳಿಸುವ ಕೆಲಸ ಮಾಡಬೇಕು" ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಈಗಾಗಲೇ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಹೆಸರುಕಾಳಿಗೆ 8,682 ನಿಗದಿ ಪಡಿಸಿದೆ. ಆದರೆ ಖರೀದಿ ಕೇಂದ್ರಗಳನ್ನು ಇನ್ನೂ ತೆರೆದಿಲ್ಲ.
ಈ ಬಗ್ಗೆ ಜಿಲ್ಲಾಧಿಕಾರಿ ದಿವ್ಯಪ್ರಭು 'ಈಟಿವಿ ಭಾರತ್' ಜೊತೆಗೆ ಮಾತನಾಡಿ, "ಜಿಲ್ಲೆಯಲ್ಲಿ ಪ್ರತಿವರ್ಷಕ್ಕಿಂತ ಈ ವರ್ಷ ಹೆಚ್ಚು ಪ್ರದೇಶದಲ್ಲಿ ಹೆಸರುಕಾಳು ಬೆಳೆ ಬಿತ್ತನೆಯಾಗಿದೆ. ಹೀಗಾಗಿ ಕಟಾವು ಪ್ರಕ್ರಿಯೆ ಕೂಡ ನಡೆದಿದೆ. ಖರೀದಿ ಕೇಂದ್ರ ಆರಂಭಕ್ಕೆ ರೈತರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಖರೀದಿ ಕೇಂದ್ರ ಆರಂಭಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಪ್ಪಿಗೆ ಸಿಕ್ಕ ತಕ್ಷಣ ಖರೀದಿ ಕೇಂದ್ರ ಆರಂಭಿಸಲಾಗುವುದು" ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಖರೀದಿ ಕೇಂದ್ರಗಳು ಆರಂಭವಾಗದ ಹಿನ್ನೆಲೆಯಲ್ಲಿ ಹೆಸರುಕಾಳು ಸಂರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಹೆಸರುಕಾಳನ್ನು ರಾಜ್ಯ ಹೆದ್ದಾರಿ ಪಕ್ಕದಲ್ಲಿ ಹಾಕಿ, ಒಣಗಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಹೆಸರುಕಾಳು ತೇವಾಂಶ ಹೊಂದಿದ್ದರೆ ಮತ್ತಷ್ಟು ದರ ಇಳಿಕೆಯಾಗುವ ಆತಂಕದಲ್ಲಿ ರೈತರಿದ್ದಾರೆ.