ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಯಾಕೆ ಅಳಿಯನನ್ನು ಬಿಜೆಪಿ ಚಿಹ್ನೆಯಡಿ ನಿಲ್ಲಿಸಿದ್ದಾರೆ. ಅದು ಜೆಡಿಎಸ್ನ ಮೊದಲ ಸೂಸೈಡ್ ಅಟೆಂಪ್ಟ್ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಸದಾಶಿವನಗರ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿ ಮೈತ್ರಿ ಬಿರುಕು ವಿಚಾರವಾಗಿ ಪ್ರತಿಕ್ರಿಯಿಸಿದರು. ಇದು ನನಗೆ ಮೊದಲಿಂದಲೂ ಗೊತ್ತಿರುವ ವಿಚಾರ. ದೇವೇಗೌಡ್ರು ಯಾಕೆ ಅಳಿಯನನ್ನು ಬಿಜೆಪಿ ಚಿಹ್ನೆನಲ್ಲಿ ನಿಲ್ಲಿಸಿದ್ದಾರೆ. ಅದು ಜೆಡಿಎಸ್ನ ಮೊದಲ ಸೂಸೈಡ್ ಅಟೆಂಪ್ಟ್. ಅದನ್ನು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಅವರ ಪಕ್ಷಕ್ಕೆ ಒಂದು ದೊಡ್ಡ ಮುಜುಗರ ಉಂಟಾಗಿದೆ ಎಂದರು.
ಅದು ಅವರ ಪಾರ್ಟಿ ತೀರ್ಮಾನ. ನಾನು ಅದಕ್ಕೆ ಮಧ್ಯಪ್ರವೇಶ ಮಾಡಲ್ಲ. ಸಿಟ್ಟಿಂಗ್ ಎಂಎಲ್ಎಗಳಿದ್ದಾರೆ, ಸಂಸದರಿದ್ದಾರೆ. ಅವರ ಪಾರ್ಟಿಗೆ ಅವರದ್ದೇ ಶಕ್ತಿ ಇದೆ. ಆ ಶಕ್ತಿ ಅವರಿಗೆ ಬೇಕಾಗಿತ್ತು. ಆದರೆ ಬಿಜೆಪಿಯವರ ಸ್ಟೈಲ್ ಇರೋದೇ ಹೀಗೆ. ಇದೊಂದೇ ರಾಜ್ಯ ಅಲ್ಲ. ಬೇರೆ ರಾಜ್ಯಗಳಲ್ಲೂ ಹೀಗೆ ನಡೆಸಿಕೊಳ್ತಿದ್ದಾರೆ. ಅದರ ಬಗ್ಗೆ ನಾನು ಹೆಚ್ಚು ಕಮೆಂಟ್ ಮಾಡಲ್ಲ. ಅದು ಅವರ ಪಕ್ಷದ ಆಂತರಿಕ ವಿಚಾರ. ಅವರ ಪಾರ್ಟಿಯಲ್ಲಿ ತೀರ್ಮಾನ ಮಾಡಿಕೊಳ್ಳಲಿ ಎಂದು ತಿಳಿಸಿದರು.
ಇಂದು ಸಿಇಸಿ ಸಭೆ ಇದೆ. ನಾವು ದೆಹಲಿಗೆ ಹೋಗ್ತಿದ್ದೇವೆ. ಬಹುತೇಕ ರಾಜ್ಯದ ಎಲ್ಲಾ ಹೆಸರು ಇಂದೇ ಕ್ಲಿಯರ್ ಆಗಬಹುದು. ಒಂದು 3 ರಿಂದ 4 ಹೆಸರು ಉಳಿದರು ಉಳಿದುಕೊಳ್ಳಬಹುದು. ಅದನ್ನು ಹೇಳೋಕೆ ಆಗಲ್ಲ ಎಂದರು.
ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರೋರು ಬರಲಿ: ಸಂಸದ ಸದಾನಂದ ಗೌಡರ ಮುಂದಿನ ರಾಜಕೀಯ ತೀರ್ಮಾನ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರಿಗೆ ಟಿಕೆಟ್ ಸಿಗಲ್ಲವೋ ಆಗ ಇವೆಲ್ಲ ಸಾಮಾನ್ಯ. ಆಯನೂರು ಮಂಜುನಾಥ್ಗೆ ಟಿಕೆಟ್ ಸಿಗಲಿಲ್ಲ. ಅವರು ನಮ್ಮ ಪಾರ್ಟಿಗೆ ಬಂದರು. ಮೂಡಿಗೆರೆಯಲ್ಲಿ ಕುಮಾರಸ್ವಾಮಿಗೆ ಟಿಕೆಟ್ ಕೊಡಲಿಲ್ಲ. ನಾವು ಅಖಂಡ ಶ್ರೀನಿವಾಸ್ ಮೂರ್ತಿಗೆ ಕೊಡಲಿಲ್ಲ. ಅವರು ಶೆಟ್ಟರ್ ಗೆ ಕೊಡಲಿಲ್ಲ. ನಾವು ಕರ್ಕೊಂಡು ಬಂದು ನಿಲ್ಲಿಸಿದ್ವಿ. ಬಿಜೆಪಿಯವರು ಸವದಿಗೆ ಕೊಡಲಿಲ್ಲ. ಅವರನ್ನೂ ಕರ್ಕೊಂಡು ಬಂದು ನಿಲ್ಲಿಸಿದ್ವಿ. ಇದೆಲ್ಲವೂ ರಾಜಕೀಯದಲ್ಲಿ ನಡೆಯುತ್ತೆ. ಯಾರ‍್ಯಾರು ಬರುತ್ತೇವೆ ಅಂತ ಹೇಳ್ತಾರೆ, ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರೋರು ಬರಲಿ. ನಮ್ಮ ತಂತ್ರಗಾರಿಕೆಯನ್ನು ನಾವು ಬಹಿರಂಗಗೊಳಿಸಲ್ಲ ಎಂದು ಡಿಕೆಶಿ ಹೇಳಿದರು.
ಇದನ್ನೂ ಓದಿ: ಐಟಿ, ಇಡಿ ದಾಳಿ ನಡೆಸಿದರೆ ಬಿಜೆಪಿಗೆ ದುಡ್ಡು ಬರುತ್ತೆ: ಸಚಿವ ರಾಮಲಿಂಗಾರೆಡ್ಡಿ ಲೇವಡಿ