ಬೆಂಗಳೂರು: “ಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ಅಗತ್ಯವಿಲ್ಲ. ಹಳ್ಳಿಯಿಂದ ದೆಹಲಿವರೆಗೂ ಕಾಂಗ್ರೆಸ್ ಪಕ್ಷ ನಮ್ಮ ಮುಖ್ಯಮಂತ್ರಿಗಳ ಪರವಾಗಿ ನಿಲ್ಲಲಿದೆ. ಪಕ್ಷದ ಅಧ್ಯಕ್ಷನಾಗಿ ನಾನು ಈ ಮಾತು ಹೇಳುತ್ತಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸ್ಪೀಕರ್ ಕೋಳಿವಾಡ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕೆಪಿಸಿಸಿ ಅಧ್ಯಕ್ಷ ನಾನು, ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷರು ರೆಹಮಾನ್ ಖಾನ್, ಇಲ್ಲಿ ನಾನೇ ಹೇಳುತ್ತಿದ್ದೇನಲ್ಲ. ಅವರ ರಾಜೀನಾಮೆ ಪ್ರಶ್ನೆಯೇ ಉದ್ಭವ ಆಗುವುದಿಲ್ಲ'' ಎಂದು ಹೇಳಿದರು.
''ನಮ್ಮ ಮುಖ್ಯಮಂತ್ರಿಗಳ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ನವರು ರಾಜಕೀಯವಾಗಿ ಷಡ್ಯಂತ್ರ ರೂಪಿಸುತ್ತಿದ್ದು, ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿರುವುದನ್ನು ಸಹಿಸಲು ವಿರೋಧ ಪಕ್ಷಗಳಿಂದ ಸಾಧ್ಯವಾಗುತ್ತಿಲ್ಲ” ಎಂದು ತಿಳಿಸಿದರು.
“ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ದೊಡ್ಡ ರಾಜ್ಯ ಕರ್ನಾಟಕ. ಇಲ್ಲಿ ನಮ್ಮ ಸರ್ಕಾರ ಇರುವುದನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಟೀಕಾಪ್ರಹಾರ ನಡೆಸಿದ್ದಾರಲ್ಲ ಎಂದು ಕೇಳಿದಾಗ, “ಪ್ರಧಾನಿಗಳು ಚುನಾವಣಾ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಅವರ ವಿಚಾರ ಪ್ರಸ್ತಾಪ ಮಾಡುತ್ತಿದ್ದು, ಈ ವಿಚಾರದಲ್ಲಿ ಅವರು ರಾಜಕಾರಣ ಮಾಡುತ್ತಿದ್ದಾರೆ. ಅವರದ್ದೇ ಸರ್ಕಾರದ ಸಚಿವರುಗಳು ಅನೇಕ ಪ್ರಕರಣಗಳ ತನಿಖೆ ಎದುರಿಸುತ್ತಿದ್ದು, ಮೊದಲು ಅವರನ್ನು ಸಚಿವ ಸಂಪುಟದಿಂದ ಕೈಬಿಡಲಿ. ನಂತರ ಈ ಬಗ್ಗೆ ಚರ್ಚೆ ಮಾಡಲಿ” ಎಂದು ತಿರುಗೇಟು ನೀಡಿದರು.
ಕಾನೂನಾತ್ಮಕ ಲೋಪದೋಷಗಳಿವೆ : ನ್ಯಾಯಾಲಯದ ತೀರ್ಪಿನ ಬಗ್ಗೆ ಅಧ್ಯಯನ ಮಾಡಿದ್ದೇವೆ. ಕಾನೂನಾತ್ಮಕ ಲೋಪದೋಷಗಳಿವೆ ಎಂಬುದು ಗೊತ್ತಾಗಿದೆ ಎಂದು ಸಿಎಂ ಕಾನೂನು ಸಲಹೆಗಾರ, ಶಾಸಕ ಎ. ಎಸ್ ಪೊನ್ನಣ್ಣ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನ್ಯಾಯಮೂರ್ತಿಗಳು ಸಿಎಂ ಪಾತ್ರ ಏನು ಎಂದು ಕೇಳಿದ್ದರು. ಅದಕ್ಕೆ ತೀರ್ಪಿನಲ್ಲೂ ಉತ್ತರವಿಲ್ಲ, ಯಾರೂ ಕೂಡ ಸಿಎಂ ಪಾತ್ರದ ಬಗ್ಗೆ ತೋರಿಸಲು ಆಗಿಲ್ಲ ಎಂದರು. ರಾಜಕೀಯ ಪ್ರೇರಿತ ಪ್ರಕರಣ ಇದು. ತನಿಖೆಯ ವಿಚಾರಣೆ ಏನು ಬೇಕಾದರೂ ಮಾಡಿಕೊಳ್ಳಲಿ. ವಿಚಾರಣೆ, ತನಿಖೆ ಆಗಲಿ. ನಮ್ಮದೇನೂ ಅಭ್ಯಂತರ ಇಲ್ಲ ಎಂದು ಹೇಳಿದರು.
ದೆಹಲಿಯ ವಕೀಲರ ಅಭಿಪ್ರಾಯ ಕೂಡ ಪಡೆದುಕೊಂಡಿದ್ದೇವೆ. ತೀರ್ಪಿನಲ್ಲಿಯೇ ಹಲವು ಲೋಪದೋಷಗಳಿವೆ. ನಾವು ಮೇಲ್ಮನವಿ ಸಲ್ಲಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಆದರೆ, ಯಾವಾಗ ಮೇಲ್ಮನವಿ ಸಲ್ಲಿಸಬೇಕು ಅಂತ ಇನ್ನೂ ತೀರ್ಮಾನ ಮಾಡಿಲ್ಲ ಎಂದು ತಿಳಿಸಿದರು.
ಏಕ ಸದಸ್ಯ ಪೀಠ ಹೇಳಿದ್ದೇ ಅಂತಿಮ ಅಲ್ಲ. ಸುಪ್ರಿಂಕೋರ್ಟ್ ತೀರ್ಪು ನೀಡಿದರೆ ಮಾತ್ರ ಅದು ಕಾನೂನಾಗುತ್ತದೆ. ಇಲ್ಲದಿದ್ದರೆ ಅದನ್ನು ಅಂತಿಮ ಎಂದು ತೀರ್ಮಾನಿಸಲಾಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah