ಧಾರವಾಡ: ಶಿಕ್ಷಣ ಕಾಶಿ, ಸಾಹಿತಿಗಳ ತವರೂರು ಎಂದು ಕರೆಸಿಕೊಳ್ಳುವ ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸ್ಥಿತಿ ಹೇಳತೀರದಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನಿಂತಿರುವ ನೀರಿನಲ್ಲಿ ವಿದ್ಯಾರ್ಥಿನಿಯರು ಪಾಠ ಕೇಳುತ್ತಿದ್ದಾರೆ.
ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಕಚೇರಿ ಮುಂಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಅಕ್ಷರಶಃ ಬೀಳುವ ಹಂತ ತಲುಪಿದೆ. ಇದೇ ವ್ಯವಸ್ಥೆಯಲ್ಲಿ ವಿದ್ಯಾರ್ಥಿನಿಯರು ಪಾಠ ಕೇಳುತ್ತಿದ್ದಾರೆ. ಕಳೆದ ವರ್ಷ ಈ ಕುರಿತು ಈಟಿವಿ ಭಾರತ ವರದಿ ಮಾಡಿತ್ತು. ಇದೀಗ ಮತ್ತೆ ಈ ಕಾಲೇಜಿಗೆ ಅದೇ ಸ್ಥಿತಿ ಬಂದಿದೆ. ಅಂದು ಕಾಲೇಜಿಗೆ ಭೇಟಿ ನೀಡಿದ್ಧ ಸಚಿವ ಸಂತೋಷ್ ಲಾಡ್ ಕಾಲೇಜಿಗೆ ಹೊಸ ಕಟ್ಟಡ ನೀಡುವ ಭರವಸೆ ನೀಡಿದ್ದರು.
ಈ ಕಾಲೇಜು ಕಟ್ಟಡ ಬಹಳ ಹಳೆಯದಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧ ಕೊಠಡಿಗಳು ಸೋರಲು ಆರಂಭಿಸಿದೆ. ಹಂಚುಗಳು ಒಡೆದು ಬಿದ್ದಿವೆ. ಕಾಲೇಜಿನಲ್ಲಿ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅತಿಥಿ ಉಪನ್ಯಾಸಕರು ಸೇರಿ ಕಾಯಂ ಉಪನ್ಯಾಸಕರಿದ್ದಾರೆ.
ಇಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಎಫ್‌ಟಿ, ಕೋರ್ಸ್‌ಗಳಿವೆ. ಹೀಗಿರುವಾಗ ಸುಸಜ್ಜಿತ ಕಟ್ಟಡ ಹೊಂದಿರಬೇಕಾಗಿದ್ದ ಈ ಕಾಲೇಜಿಗೆ ಇನ್ನೂ ಆ ಸೌಭಾಗ್ಯ ಕೂಡಿ ಬಂದಿಲ್ಲ.
ಸರ್ಕಾರದಿಂದ 3.5ಕೋಟಿ ಅನುದಾನ: ಈ ವಿಚಾರ ಮಾಧ್ಯಮದಲ್ಲಿ ಪ್ರಸಾರದ ಬೆನ್ನಲ್ಲೆ ಜಿಲ್ಲಾಧಿಕಾರಿ ದಿವ್ಯಪ್ರಭು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಡಿಸಿ ಅವರು, "ಈಗ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇರುವ ಎಲ್ಲ ಶಾಲೆಗಳು ಕಾಲೇಜುಗಳು, ಅಂಗನವಾಡಿಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಧಾರವಾಡ ನಗರದಲ್ಲಿ ಇರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಕಟ್ಟಡ ಸೋರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ತಾತ್ಕಾಲಿಕ ಹಾಗೂ ಶಾಶ್ವತ ನಿರ್ಧಾರದ ಬಗ್ಗೆ ಯೋಜಿಸಲಾಗುತ್ತದೆ".
"ಈ ಹಿಂದೆ ಉಸ್ತುವಾರಿ ಸಚಿವರು, ಹಿಂದಿನ ಜಿಲ್ಲಾಧಿಕಾರಿಗಳು ಈ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಅಗತ್ಯತೆ ಬಗ್ಗೆ ಸರ್ಕಾರಕ್ಕೆ ತಕ್ಷಣ ಅರ್ಜಿ ಸಲ್ಲಿಸಿದ್ದು, ಸರ್ಕಾರ ಕೂಡ ತಕ್ಷಣ ಸ್ಪಂದಿಸಿದ್ದು, 3.5 ಕೋಟಿ ಅನುದಾನವನ್ನು ಹೊಸ ಕಾಲೇಜು ನಿರ್ಮಾಣಕ್ಕೆ ಈ ಕಾಲೇಜಿಗಾಗಿ ನೀಡಿದೆ. ಈ ವರ್ಷದಲ್ಲಿ 1 ಕೋಟಿ 16 ಲಕ್ಷ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಹೊಸ ಕಟ್ಟಡ ಕಟ್ಟಲು ಕರ್ನಾಟಕ ಹೌಸಿಂಗ್ ಬೋರ್ಡ್ನ್ನು ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ. ಅವರ ಜೊತೆ ಕೂಡ ಮಾತನಾಡಿಯಾಗಿದೆ. ಅವರಿಗೆ ತ್ವರಿತಗತಿಯಲ್ಲಿ ಈ ಕೆಲಸ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ಅಲ್ಲಿ ತನಕ ವಿದ್ಯಾರ್ಥಿಗಳನ್ನು ಬೇರೆ ಕಡೆ ಸ್ಥಳಾಂತರಿಸಿ ತರಗತಿ ನಡೆಸಲು ಚರ್ಚೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಬೀದರ್–ಬೆಂಗಳೂರು ವಿಮಾನ ಸೇವೆ ಪುನಾರಂಭ: 2 ವಾರದಲ್ಲಿ ಪ್ರಸ್ತಾವನೆ ಸಲ್ಲಿಸಲು ಸೂಚನೆ - Bidar Bengaluru Flight