ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ತ್ವರಿತ ಸಾಲಗಳನ್ನು ನೀಡುವ ಕುರಿತಾಗಿ ಜಾಹೀರಾತುಗಳನ್ನು ಹಾಕಲಾಗುತ್ತಿದೆ. ಗೂಗಲ್ ಪ್ಲೇ ಸ್ಟೋರ್/ಆ್ಯಪಲ್ ಆ್ಯಪ್ ಸ್ಟೋರ್ಗಳಲ್ಲಿ ಸುಲಭವಾಗಿ ಸಿಗುವ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಸಾಕಷ್ಟು ಲೋನ್ ಆ್ಯಪ್ಗಳಿದ್ದು, ಅವುಗಳನ್ನು ಬಳಸುವ ಜನರು ಜಾಗರೂಕರಾಗಿರುವಂತೆ ದಾವಣಗೆರೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ. ಈ ಆ್ಯಪ್ಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಂಭವ ಜಾಸ್ತಿಯಿದೆ. ಸಾರ್ವಜನಿಕರಿಗೆ ತ್ವರಿತ ಗತಿಯಲ್ಲಿ ಸಾಲವನ್ನು ಒದಗಿಸಲಾಗುತ್ತಿದ್ದು, ಕೆಲ ಆ್ಯಪ್ಗಳು ನೀಡುವ ಸಾಲದ ಮೇಲಿನ ಬಡ್ಡಿ ದರಗಳು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿರುವುದು ಕಂಡು ಬಂದಿದೆ. ಇಂತಹ ಮೊಬೈಲ್ ಅಪ್ಲಿಕೇಶನ್ಗಳ ಮೂಲಕ ಸಾಲ ಪಡೆದ ಅಮಾಯಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಸಾಲ ವಸೂಲಾತಿಗಾಗಿ ಮೊಬೈಲ್ ಅಪ್ಲಿಕೇಶನ್ ನಿರ್ವಾಹಕರು ಗ್ರಾಹಕರಿಗೆ ಹಿಂಸೆ ನೀಡುವ ಅವಕಾಶ ಹೆಚ್ಚಿದೆ. ಆದ್ದರಿಂದ ಸಾರ್ವಜನಿಕರು/ಗ್ರಾಹಕರು ಇಂತಹ ತ್ವರಿತ ಲೋನ್ ಮೊಬೈಲ್ ಅಪ್ಲಿಕೇಶನ್ಗಳಿಂದ (Instant loan App Mobile Application) ಸಾಲ ಪಡೆಯುವ ಮುನ್ನ ಎಚ್ಚರ ವಹಿಸುವುದು ಸೂಕ್ತ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ ಗೂಗಲ್ ಪ್ಲೇ ಸ್ಟೋರ್/ಆ್ಯಪಲ್ ಆ್ಯಪ್ ಸ್ಟೋರ್ಗಳಲ್ಲಿ ಕಂಡು ಬರುವ ತ್ವರಿತ ಲೋನ್ ಆ್ಯಪ್ಗಳಾದ Navi Loan app, CASHE, EarlySalary, Dhani, FlexiLoans, Money View Loans, mPokket, Lendingkart, Indialends, NIRA, Simpl, Krazy Bee, Slice, One Mobikwik, ZestMoney, TrueBalance, Mobiquity, MyLoanCare, CapitalFloat, KreditBee, Kreditzy ಇವುಗಳಿಂದ ದೂರವಿರಿ ಎಂದು ಜನರಿಗೆ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದೆ.