ದಾವಣಗೆರೆ: ಜನರಿಗೆ ಮೋಸ ಮಾಡಿ ಟೋಪಿ ಹಾಕಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಿಎಂ ಸಿದ್ದರಾಮಯ್ಯನವರ ಎದೆಬಗೆದ್ರೆ ಬರೀ ಟಿಪ್ಪು ಟಿಪ್ಪು ಎನ್ನುತ್ತೆ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಕಿಡಿಕಾರಿದರು.
ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಿಂದೂಗಳ ಮೇಲೆ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಯವರಿಗೆ ಟಿಪ್ಪು, ಘಜಿನಿ ಮೊಹಮ್ಮದ್, ಬಾಬರ್ ಭಾವಚಿತ್ರ ಕಂಡ್ರೆ ಅವರಿಗೆ ತುಂಬಾ ಪ್ರೀತಿ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಕರಸೇವಕರನ್ನು ಬಂಧಿಸಿದರು. ರೈತರನ್ನು ಬೀದಿಗಿ ನಿಲ್ಲಿಸಿದ್ದು, ಇದೇ ಸರ್ಕಾರ ಎಂದು ಆರೋಪಿಸಿದರು.
ಹನುಮಧ್ವಜ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಪಂ ಅನುಮತಿ ಪಡೆದು ಹನುಮ ಧ್ವಜ ಹಾರಿಸಿದ್ದರು. ಹನುಮಧ್ವಜ ಇಳಿಸಿ ರಾಷ್ಟ್ರದ ಧ್ವಜವನ್ನು ಹಾರಿಸಿದರು. ನಾವು ರಾಷ್ಟ್ರ ಧ್ವಜವನ್ನು ಗೌರವಿಸುತ್ತೇವೆ. ರಾಷ್ಟ್ರದ ಧ್ವಜ ಹಾರಿಸಲು ನೀತಿ ನಿಯಮಗಳಿವೆ. ಅದ್ರೇ ಈ ಸರ್ಕಾರ ಅದನ್ನು ಪಾಲನೆ ಮಾಡಿಲ್ಲ ಎಂದು ಅಪಾದಿಸಿದರು.
ಈ ಸರ್ಕಾರಕ್ಕೆ ಲೋಕಸಭೆಯಲ್ಲಿ ಎರಡು ಸಲ ಬಹುಮತ ಇಲ್ಲ, ಈ ದೇಶದ ಜನ ಕಾಂಗ್ರೆಸ್ನ್ನು ತಿರಸ್ಕರಿಸಿದ್ದಾರೆ. 500 ವರ್ಷಗಳ ಹೋರಾಟದ ಪ್ರತಿಫಲ ರಾಮಮಂದಿರ ಆಯಿತು. ಸಿದ್ದರಾಮಯ್ಯ, ಡಿಕೆಶಿ ನಮ್ಮ ತಂದೆ ತಾಯಿ ನಮಗೆ ದೇವರ ಹೆಸರಿಟ್ಟಿದ್ದಾರೆಂದು ಹೇಳ್ತಿರಾ, ಡಿಕೆಶಿಯವರೇ ನಿಮ್ಮ ಹೆಸರಿನಲ್ಲಿ ಶಿವ ಇದ್ದಾನೆ. ಅದ್ರೇ ನಿಮ್ಮ ಕೊರಳಿನಲ್ಲಿ ಮಿಡಿ ನಾಗರಹಾವು ಇದೆ. ನೀವು ಮತ್ತು ಸಿದ್ದರಾಮಯ್ಯಯವರು ಹಿಂದುಗಳನ್ನು ದ್ವೇಷ ಮಾಡ್ತಿರಾ ಎಂದು ಪ್ರಶ್ನಿಸಿದರು.
ರಾಷ್ಟ್ರಪತಿಗೆ ಅವಮಾನ: ಸಿದ್ದರಾಮಯ್ಯನವರು ಶೋಷಿತರ ಸಮಾವೇಶ ಮಾಡಿದ್ದಾರೆ. ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆ ರಾಷ್ಟ್ರಪತಿ ದ್ರೌಪತಿ ಮುರ್ಮು ಕುರಿತು ಏಕವಚನ ಬಳಕೆ ಮಾಡಿದ್ದೀರಿ. ಶ್ರೀರಾಮ ಭಕ್ತರನ್ನು ದತ್ತಪೀಠದಲ್ಲಿ ನೀವು ಬಂಧಿಸುತ್ತೀರಿ. ಸಿದ್ದರಾಮಯ್ಯನವರೇ ನಿಮ್ಮ ಹೆಸರಿನಲ್ಲಿ ರಾಮ ಇರಬಹುದು. ಅದ್ರೇ ನೀವು ಶ್ರೀರಾಮನ ವಿರೋಧಿಗಳು, ಇದರಿಂದ ಬಿಜೆಪಿ ಸಂಘ ಪರಿವಾರ ನಿಮ್ಮ ವಿರುದ್ಧ ನಿರಂತರವಾಗಿ ಪ್ರತಿಭಟನೆ ಮಾಡುತ್ತದೆ. ಹನುಮಧ್ವಜವನ್ನು ಇಳಿಸಿರಬಹುದು, ಅದ್ರೇ ನಮ್ಮ ಹಿಂದುಗಳ ಹೃದಯ ಸಾಮ್ರಾಜ್ಯದಲ್ಲಿ ರಾಮ, ಹನುಮ, ಶಿವಾಜಿ ಇದ್ದಾರೆ ಎಂದರು.
ಇದನ್ನೂಓದಿ:ಮಂಡ್ಯದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿಯಿಂದ ಪ್ರಚೋದನೆ: ಸಿಎಂ, ಡಿಸಿಎಂ ವಾಗ್ದಾಳಿ