ದಾವಣಗೆರೆ: ದಾವಣಗೆರೆ - ಚಿತ್ರದುರ್ಗ - ತುಮಕೂರು ನೇರ ರೈಲ್ವೆ ಮಾರ್ಗದ ಕಾಮಗಾರಿ 2027ರ ಜನವರಿಯೊಳಗೆ ಪೂರ್ಣಗೊಳ್ಳಲಿದೆ. ಬಳಿಕ ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ.
ಈ ಯೋಜನೆಗೆ 2011-12ರಲ್ಲೇ ಕೇಂದ್ರ ಸರ್ಕಾರದಿಂದ ಮಂಜೂರಾತಿ ಸಿಕ್ಕಿತ್ತು. ಒಟ್ಟು 2,140 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನ ಆಗುತ್ತಿದೆ. 2019ರೊಳಗೆ ಅ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಅದರೆ, ಕಾರಣಾಂತರಗಳಿಂದ ತಡವಾಗಿತ್ತು.
ಭರದಿಂದ ಸಾಗಿದೆ ಭೂಸ್ವಾದೀನ ಪ್ರಕ್ರಿಯೆ - ಸೋಮಣ್ಣ: ದಾವಣಗೆರೆಯಲ್ಲಿ ಈ ಬಗ್ಗೆ ಸಭೆ ನಡೆಸಿದ ಸಚಿವ ವಿ.ಸೋಮಣ್ಣ, ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಕಾಮಗಾರಿಯನ್ನು ಎರಡು ವರ್ಷದಲ್ಲಿ ಮುಗಿಸುವ ಗುರಿ ಹೊಂದಲಾಗಿದೆ. ಇದರಿಂದ ಕೆಲವೇ ಗಂಟೆಗಳಲ್ಲಿ ದಾವಣಗೆರೆಯಿಂದ ರಾಜ್ಯದ ರಾಜಧಾನಿಗೆ ತಲುಪಬಹುದು. ಈ ಸಂಬಂಧ ಡಬ್ಲಿಂಗ್ ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ಸರಾಗವಾಗಿ ನಡೆದಿದೆ ಎಂದು ತಿಳಿಸಿದರು.
ಈ ಮೊದಲು ಬೆಂಗಳೂರು ತಲುಪಲು ಒಟ್ಟು 327 ಕಿ.ಮೀ ಕ್ರಮಿಸಬೇಕಾಗಿತ್ತು. ಇದೀಗ ನೂತನ ನೇರ ರೈಲು ಮಾರ್ಗದಿಂದ ಒಟ್ಟು 196 ಕಿ.ಮೀ ಮಾತ್ರ ಪ್ರಯಾಣದ ಅಗತ್ಯವಿದೆ. ಬರೊಬ್ಬರಿ 60 ಕಿ.ಮೀ ಪ್ರಯಾಣ ಕಡಿತವಾಗಲಿದೆ. ಇದರಿಂದ ಜನರಿಗೆ ಹಣ, ಸಮಯ ಹಾಗೂ ಪ್ರಯಾಣವೂ ಕಡಿಮೆಯಾಗಲಿದೆ. ಸದ್ಯ ದಾವಣಗೆರೆಯಿಂದ ವಂದೇ ಭಾರತ್ ರೈಲಿನಲ್ಲಿ 327 ಕಿ.ಮೀ ದೂರವನ್ನು 3 ಗಂಟೆ 25 ನಿಮಿಷಗಳಲ್ಲಿ ಬೆಂಗಳೂರು ತಲುಪಬಹುದಾಗಿದೆ. ಇದೀಗ ನೇರ ರೈಲು ಮಾರ್ಗದ ಮೂಲಕ 2 ಗಂಟೆಗಳಲ್ಲೇ ಜನರು ಬೆಂಗಳೂರು ಸೇರಬಹುದು.
ಈಗಾಗಲೇ ದಾವಣಗೆರೆ ಜಿಲ್ಲೆಯಲ್ಲಿ ಕಾಮಗಾರಿ ನಡೆಯುತ್ತಿದೆ. ದಾವಣಗೆರೆ - ಭರಮಸಾಗರ - ಚಿತ್ರದುರ್ಗ ಮಧ್ಯದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ. ಜಮೀನಿನಲ್ಲಿ ರೈತರು ಬೆಳೆಗಳನ್ನು ಬೆಳೆದಿದ್ದು, ಅವರಿಗೆ ತೊಂದರೆಯಾಗದಂತೆ, ಕಟಾವಿನ ಬಳಿಕವೇ ರೈಲ್ವೆ ಕಾಮಗಾರಿ ಆರಂಭಿಸುವಂತೆ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಈ ಹಿಂದೆಯೇ ಸೂಚನೆ ನೀಡಿದ್ದರು.
234 ಎಕರೆ ಭೂಸ್ವಾಧೀನ: ಈ ನೇರ ರೈಲ್ವೆ ಮಾರ್ಗ ಯೋಜನೆಗೆ ದಾವಣಗೆರೆ ಜಿಲ್ಲೆಯಲ್ಲಿ 236 ಎಕರೆ ಭೂಮಿ ಅಗತ್ಯವಿತ್ತು. ಈ ಪೈಕಿ ಒಟ್ಟು 234 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಉಳಿದ 2ರಿಂದ 3 ಎಕರೆ ಮಾತ್ರ ಸ್ವಾಧೀನ ಬಾಕಿಯಿದೆ. ಅಲ್ಲದೆ, 3-4 ತಿಂಗಳಲ್ಲಿ ಈ ಎಲ್ಲ ಪ್ರಕ್ರಿಯೆ ಮುಗಿಸಿ, ಬಾಕಿಯಿರುವ 4-5 ಕಾಮಗಾರಿ ಆರಂಭಿಸುವುದಾಗಿ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದರು.
ಕಾಮಗಾರಿಗೆ 2,140 ಕೋಟಿ ಹಣ: 2,140 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನವಾಗುತ್ತಿದೆ. ಪ್ರಧಾನಿ ಮೋದಿ ಹೆಚ್ಚಿನ ಕಾಳಜಿ ವಹಿಸಿ, 2027ಕ್ಕೆ ಲೋಕಾರ್ಪಣೆ ಮಾಡಬೇಕು ಎಂದು ತಿಳಿಸಿದ್ದಾರೆ. ದಾವಣಗೆರೆ - ಚಿತ್ರದುರ್ಗದಲ್ಲಿ ಈ ರೈಲ್ವೆ ಮಾರ್ಗಕ್ಕೆ ಒಟ್ಟು 2,409 ಎಕರೆ ಭೂಮಿ ಅವಶ್ಯಕತೆ ಇತ್ತು. ಅದರಲ್ಲಿ, 145 ಎಕರೆ ಭೂಸ್ವಾಧೀನ ಪ್ರಕ್ರಿಯೆ ಮಾತ್ರ ಬಾಕಿ ಇದೆ. ನಾಲ್ಕು ತಿಂಗಳಲ್ಲಿ ಅದು ಮುಗಿಯುತ್ತದೆ. ಇದು ತುಂಬಾ ವರ್ಷಗಳ ಬೇಡಿಕೆ, ಎರಡು ಗಂಟೆಯಲ್ಲಿ ಬೆಂಗಳೂರು ತಲುಪಬಹುದು. ಈ ಮಾರ್ಗದ ವೇಗವನ್ನು ಗಂಟೆಗೆ 80 ಕಿ.ಮೀ. ಇರುವುದನ್ನು, ಬಳಿಕ 110 ರಿಂದ 135 ಕಿ.ಮೀ.ಗೆ ಹೆಚ್ಚಿಸಿದ್ದೇವೆ ಎಂದು ಸಚಿವರು ತಿಳಿಸಿದರು.
16 ಹೊಸ ನಿಲ್ದಾಣಗಳು: ಈ ಮಾರ್ಗದಲ್ಲಿ ರೈಲು ಕಾಣದ ಹಳ್ಳಿಗಳು, ತಾಲೂಕುಗಳು ಸೇರಿವೆ. ಒಟ್ಟು 16 ಹೊಸ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ತುಮಕೂರು (ಹಳೆ ನಿಲ್ದಾಣ), ಉರಕೆರೆ ತಿಮ್ಮರಾಜನಹಳ್ಳಿ, ಜೋಗಿಹಳ್ಳಿ, ಚಿಕ್ಕನಹಳ್ಳಿ, ಶಿರಾ, ತಾವರೆಕೆರೆ, ಆನೆಸಿದ್ರಿ, ಹಿರಿಯೂರು ಮೇಟಿ ಕುರ್ಕೆ, ಐಮಂಗಲ, ಪಾಲವ್ವನಹಳ್ಳಿ, ದೊಡ್ಡಸಿದ್ಧವನಹಳ್ಳಿ, ಚಿತ್ರದುರ್ಗ (ಹಳೆ ನಿಲ್ದಾಣ), ಸಿರಿಗೆರೆ ಕ್ರಾಸ್, ಭರಮಸಾಗರ ಹೆಬ್ಬಾಳು, ಆನಗೋಡು, ತೋಳಹುಣಸೆ (ಹಳೆ ನಿಲ್ದಾಣ), ದಾವಣಗೆರೆ (ಹಳೆ ನಿಲ್ದಾಣ) ನಿಲ್ದಾಣಗಳು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಚಾರಣ ಪ್ರಿಯರಿಗೆ ಗುಡ್ ನ್ಯೂಸ್: ನಾಗಮಲೆಗೆ ತೆರಳಲು ಅವಕಾಶ, ಬುಕಿಂಗ್ ಆರಂಭ