ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ಇಂದು ದ.ಕ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಮಂಗಳೂರಿನ ಬಂಟ್ಸ್ ಹಾಸ್ಟೆಲ್ನ ಬಿಜೆಪಿ ಚುನಾವಣಾ ಕಚೇರಿಯಿಂದ ಮೆರವಣಿಗೆ ನಡೆಯಿತು.
ಈ ವೇಳೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್, ಸಿ.ಟಿ.ರವಿ, ಶಾಸಕರಾದ ಸುನಿಲ್ ಕುಮಾರ್, ವೇದವ್ಯಾಸ ಕಾಮತ್, ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಮುಖಂಡರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆಯಲ್ಲಿ ಕೇಸರಿ ಧ್ವಜದೊಂದಿಗೆ ಜೆಡಿಎಸ್ ಧ್ವಜ, ತುಳು ಬಾವುಟ ಕಂಡುಬಂತು. ಬೃಜೇಶ್ ಚೌಟ ಅವರು ತುಳುನಾಡ ಶಾಲು ಧರಿಸಿ ಗಮನ ಸೆಳೆದರು. ಮೆರವಣಿಗೆ ಬಂಟ್ಸ್ ಹಾಸ್ಟೆಲ್ ಸರ್ಕಲ್ನಿಂದ ಅಂಬೇಡ್ಕರ್ ವೃತ್ತವಾಗಿ ಮಿಲಾಗ್ರಿಸ್, ಕ್ಲಾಕ್ ಟವರ್ಗೆ ಬಂದು ಟೌನ್ ಹಾಲ್ ಒಳಗಡೆ ಆಗಮಿಸಿತು. ಟೌನ್ ಹಾಲ್ನ ಆವರಣದೊಳಗೆ ಬಹಿರಂಗ ಸಭೆ ನಡೆಯಿತು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಕ್ಯಾ.ಬೃಜೇಶ್ ಚೌಟ, "ಕಾರ್ಯಕರ್ತರ ಹುರುಪು ಮತ್ತು ಕ್ಷೇತ್ರದ ಜನರ ಉತ್ಸಾಹ ಹೆಚ್ಚಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಅಪಾರ ವಿಶ್ವಾಸ ತೋರುತ್ತಿದ್ದಾರೆ. ಮತ್ತೊಮ್ಮೆ ಹಿಂದುತ್ವದ ಭದ್ರಕೋಟೆಯಲ್ಲಿ ಬಿಜೆಪಿ ಜಯಗಳಿಸಲಿದೆ" ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, "ಬಿಜೆಪಿಯ ಪರ ಜನರ ಒಲವಿದೆ. ನಮ್ಮ ಹಿಂದಿನ ದಾಖಲೆಗಳನ್ನು ಮೀರಿ ಬೃಜೇಶ್ ಚೌಟ ಗೆಲುವು ಸಾಧಿಸಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ, ಯದುವೀರ್ ಒಡೆಯರ್ ಸಾಥ್ - HD Kumaraswamy