ಮೈಸೂರು: ಜಾಗತಿಕ ಯುದ್ಧ ವಿರೋಧಿಸಿ ಹಾಗೂ ಶಾಂತಿಗಾಗಿ ಜಾಗತಿಕ ಅಹ್ಮದಿಯಾ ಮುಸ್ಲಿಂ ಸಂಘಟನೆಯ ಯುವಕರ ತಂಡವೊಂದು 45 ದಿನಗಳ ಕಾಲ 3,700 ಕಿ.ಮೀ. ಪ್ರವಾಸ ಕೈಗೊಂಡಿದೆ. ಕೇರಳ ರಾಜದ್ಯ ಮಲ್ಲಪ್ಪುರಂ ಜಿಲ್ಲೆ ನಿಲಂಬೂರು ತಾಲೂಕಿನ ಕರುಣೈ ಹಳ್ಳಿ ಹಾಗೂ ಸುತ್ತಮುತ್ತ ಇರುವ ಗ್ರಾಮಗಳ ಐವರು ಸೆ.6ರಂದು ಕೇರಳದ ಕ್ಯಾಲಿಕಟ್(ಕೋಝಿಕ್ಕೋಡ್) ನಗರದಿಂದ ಸೈಕಲ್ ಪ್ರವಾಸ ಆರಂಭಿಸಿ ವಯನಾಡು ಮೂಲಕ ಸೆ.8ರ ಸಂಜೆ ಮೈಸೂರು ಪ್ರವೇಶಿಸಿದ್ದಾರೆ.
ಈ ಬಗ್ಗೆ ಯುವಕರ ತಂಡ ಮೈಸೂರು ಸೈಕ್ಲಿಂಗ್ ಕ್ಲಬ್ ಸದಸ್ಯರೊಂದಿಗೆ ತಮ್ಮ ಉದ್ದೇಶಗಳನ್ನು ಹಂಚಿಕೊಂಡಿದೆ. 'ಜಾಗತಿಕ ಆಹ್ಮದಿಯಾ ಮುಸ್ಲಿಂ ಸಂಘಟನೆಯು ಲೋಕದಲ್ಲಿ ಶಾಂತಿ ಸ್ಥಾಪನೆಗಾಗಿ ಮತ್ತು ವಿನಾಶಕಾರಿ ಮಹಾಯುದ್ಧವನ್ನು ತಡೆಯಲು ಜಗತ್ತಿನ ಎಲ್ಲಾ ರಾಜಕೀಯ ಮತ್ತು ಧಾರ್ಮಿಕ ನೇತಾರರಿಗೆ ಪತ್ರಗಳನ್ನು ಬರೆದಿದೆ. ಮತ್ತು ವಿವಿಧ ದೇಶಗಳ ಸಂಸತ್ಗಳಿಗೆ ಭೇಟಿ ನೀಡಿ ಭಾಷಣಗಳನ್ನು ಮಾಡುವ ಮೂಲಕ ಸಂಘಟನೆಯ ಜಾಗತಿಕ ನೇತಾರರಾದ ಹಝರತ್ ಮಿರ್ಝಾ ಮಸ್ರೂರ್ ಅಹ್ಮದ್ ಅವರು 20 ವರ್ಷಗಳಿಂದ ಅಹರ್ನಿಶಿ ಪ್ರಯತ್ನಿಸುತ್ತಿದ್ದಾರೆ' ಎಂದು ಯುವಕರು ತಿಳಿಸಿದ್ದಾರೆ.
ಇದರಿಂದ ಪ್ರೇರಣೆ ಪಡೆದ ಯುವಕರ ತಂಡ "ಪ್ರೀತಿ ಎಲ್ಲರೊಂದಿಗೂ, ಹಗೆಯಿಲ್ಲ ಯಾರೊಂದಿಗೂ" ಎಂಬ ಘೋಷಣೆಯೊಂದಿಗೆ ದೇಶದಲ್ಲಿ ಐಕ್ಯಮತ್ಯ ಸಾಧಿಸಲು, ಸೌಹಾರ್ದತೆಯನ್ನು ಬೆಳೆಸಲು, ಪರಿಸರವನ್ನು ಕಾಪಾಡಲು ಹಾಗೂ ಸೇವಾ ಮನೋಭಾವನೆಯನ್ನು ವೃದ್ಧಿಸಲು ಸೈಕಲ್ ಪ್ರವಾಸ ಕೈಗೊಂಡಿದ್ದಾರೆ. ಕೇರಳದ ಕ್ಯಾಲಿಕಟ್ನಿಂದ ಆರಂಭಗೊಂಡ ಸೈಕಲ್ ಪ್ರವಾಸ ಪ್ರಕೃತಿ ವಿಕೋಪಕ್ಕೆ ಒಳಗಾಗಿದ್ದ ವೈಯನಾಡ್ ತಲುಪಿ ಅಲ್ಲಿಯ ನಾಗರಿಕರಿಗೆ ಸಾಂತ್ವನ ಹೇಳಿ ಹೊರಟು ಮೈಸೂರಿಗೆ ತಲುಪಿದ್ದಾರೆ. ಭಾನುವಾರ ಸಂಜೆ ಮೈಸೂರಿಗೆ ಆಗಮಿಸಿ, ರಾತ್ರಿ ಮೈಸೂರಿನ ಮಹಮ್ಮದ್ ಅಲಿ ಮತ್ತು ಸ್ಥಳೀಯರ ಆತಿಥ್ಯದಲ್ಲಿ ತಂಡವು ವಾಸ್ತವ್ಯ ಹೂಡಿದೆ.
ಇಂದು ಬೆಳಗ್ಗೆ 6ಕ್ಕೆ ಮೈಸೂರು ಅರಮನೆಯಿಂದ ಬೆಂಗಳೂರಿಗೆ ಹೊರಡುವರು. ಬೆಂಗಳೂರಿನಿಂದ ಹೈದರಾಬಾದ್ ಮಾರ್ಗವಾಗಿ ದೇಶದ ಪ್ರಮುಖ ನಗರಗಳಾದ ಪುಣೆ, ಮುಂಬೈ, ಅಹ್ಮದಾಬಾದ್, ಜೈಪುರ, ದೆಹಲಿ ಮೂಲಕ ಸಾಗಿ ಪಂಜಾಬಿನ ಅಮೃತಸರದ ಬಳಿಯ ಕಾಡಿಯಾನ್ನಲ್ಲಿ ಪ್ರವಾಸವು ಮುಕ್ತಾಯವಾಗಲಿದೆ. ಅಲ್ಲಿಂದ ರೈಲು ಮೂಲಕ ತಮ್ಮ ಸ್ವಸ್ಥಾನಕ್ಕೆ ಯುವಕರು ತೆರಳುವರು. ತಂಡದ ಮಿಶಲ್, ಅಮೀರ್, ಸಲಾಂ, ಸಲ್, ರಹೀಂ ಐವರು ಆರಂಭದಿಂದ ಅಂತ್ಯದವರೆಗೂ ಜೊತೆಯಲ್ಲಿಯೇ ಸಾಗಲಿದ್ದಾರೆ. ಸೈಕಲಿಸ್ಟ್‌ಗಳಾದ ಅಂಕುರ್ ಘೋಷ್ ಹಾಗೂ ಅದಿಲ್ ತಂಡಕ್ಕೆ ಸಲಹೆ ನೀಡಿದ್ದಾರೆ. ಆದರೆ ಇವರು ತಂಡದೊಂದಿಗೆ ಹೋಗುವುದಿಲ್ಲ.
ಜಗತ್ತಿನಲ್ಲಿ ಯುದ್ಧದಿಂದ ಸಾಕಷ್ಟು ಸಾವು-ನೋವುಗಳು ಆಗಿವೆ. ಶಾಂತಿ ನೆಲೆಸಿ ಎಲ್ಲರು ಸೌಹಾರ್ದತೆಯುತವಾಗಿ ಬದುಕಲಿ ಎಂಬ ಉದ್ದೇಶದಿಂದ ಸೈಕಲ್ ಪ್ರವಾಸ ಕೈಗೊಂಡಿದ್ದೇವೆ ಎನ್ನುತ್ತಾರೆ ಸೈಕಲಿಸ್ಟ್ ಅದಿಲ್.