ಮೈಸೂರು: ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದರೂ, ಪರಿಹಾರ ನೀಡದೆ ಸತಾಯಿಸುತ್ತಿದ್ದ ಮೈಸೂರು ಮಹಾನಗರ ಪಾಲಿಕೆಯ ವಿರುದ್ಧ ಕೋರ್ಟ್ ಜಪ್ತಿಗೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ರೈತರು ಹಾಗೂ ಕೋರ್ಟ್ ಸಿಬ್ಬಂದಿಯ ಸಮ್ಮುಖದಲ್ಲಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ಆಡಳಿತ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾಯಿತು.
ಹಿನ್ನೆಲೆ: ಮೈಸೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಘಟಕ ಸ್ಥಾಪಿಸಲು ನಗರದ ಹೊರವಲಯದ ರಮ್ಮನಹಳ್ಳಿ ಗ್ರಾಮದ ವಿವಿಧ ಸರ್ವೇ ನಂಬರ್ಗಳಲ್ಲಿರುವ ಸುಮಾರು 45 ಎಕರೆ ಕೃಷಿ ಭೂಮಿಯನ್ನು 1994ರಲ್ಲಿ ಮೈಸೂರು ಮಹಾನಗರ ಪಾಲಿಕೆ ಭೂಸ್ವಾಧೀನ ಮಾಡಿಕೊಂಡಿತ್ತು. ಪ್ರತಿ ಎಕರೆಗೆ 45 ಸಾವಿರ ರೂ ಪರಿಹಾರ ಕೊಡುವುದಾಗಿ ಹೇಳಿತ್ತು. ಆದರೆ ಒಂದು ಎಕರೆಗೆ ಈ ಪರಿಹಾರ ಸಾಕಾಗುವುದಿಲ್ಲ ಎಂದು ರೈತರು ಕೋರ್ಟ್ ಮೊರೆ ಹೋಗಿದ್ದರು.
2021ರಲ್ಲಿ ಕೋರ್ಟ್ ಹೆಚ್ಚಿನ ಪರಿಹಾರ ನೀಡಲು ಆದೇಶಿಸಿತ್ತು. ಆದರೆ ನ್ಯಾಯಾಲಯದ ಆದೇಶದಂತೆ ಸಂಪೂರ್ಣ ಪರಿಹಾರ ನೀಡಲು ಪಾಲಿಕೆ ವಿಳಂಬ ಮಾಡಿದೆ. ಇದರಿಂದ ಭೂಮಿ ಕಳೆದುಕೊಂಡ ರೈತರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶ ಪಾಲಿಸದ ಪಾಲಿಕೆ ಅಧಿಕಾರಿಗಳ ವಿರುದ್ಧ ಆಡಳಿತ ಕಚೇರಿಯನ್ನು ಜಪ್ತಿ ಮಾಡುವಂತೆ ಆದೇಶಿಸಿತ್ತು.
ನ್ಯಾಯಾಲಯ 16 ಲಕ್ಷ ರೂ.ಯಂತೆ ಪರಿಹಾರ ನೀಡಲು ಆದೇಶಿಸಿತ್ತು. ಆದರೆ ಪಾಲಿಕೆ ಯಾವುದೇ ಹಣವನ್ನು ಸಂಪೂರ್ಣವಾಗಿ ನೀಡಿಲ್ಲ. ಅರ್ಧ ಹಣವನ್ನು ಮಾತ್ರ ಪಾವತಿಸಿದ್ದು, ಉಳಿದ ಹಣವನ್ನು ನೀಡಲು ಸತಾಯಿಸುತ್ತಿತ್ತು. ಹಾಗಾಗಿ ಮತ್ತೆ ನ್ಯಾಯಾಲಯದ ಮೊರೆ ಹೋದೆವು" ಎಂದು ರೈತ ಮಹದೇವ್ ಮಾಹಿತಿ ನೀಡಿದರು.
ಇದನ್ನೂ ಓದಿ: ಕೋರ್ಟ್ ಆದೇಶಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು: ರೈತನಿಗೆ ಪರಿಹಾರ ನೀಡದ್ದಕ್ಕೆ ಎಸಿ ಕಚೇರಿ ಸಾಮಗ್ರಿ ಜಪ್ತಿ!