ಗಂಗಾವತಿ: ಇಲ್ಲಿನ ಎಪಿಎಂಸಿ ಸಮೀಪದ ನಿವಾಸಿ ಹಾಗು ಉದ್ಯಮಿ ಆರ್ಹಾಳ ಶರಣಪ್ಪ ಎಂಬವರ ಪುತ್ರಿ ಐಶ್ವರ್ಯ ಗೌಡರ್ ಮತ್ತು ಇವರ ಪತಿ ಕಿರಣ್ ಪಾಟೀಲ್ ಅವರು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ದುಬೈನಿಂದ ಗಂಗಾವತಿಗೆ ಆಗಮಿಸಿದ್ದಾರೆ.
ಈ ಹಿಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ಇದೇ ರೀತಿ ಪರವೂರಿನಿಂದ ಆಗಮಿಸಿ ಮತದಾನ ಮಾಡಿದ್ದರು. ಈ ಮೂಲಕ ದೇಶದ ಜವಾಬ್ದಾರಿಯುತ ನಾಗರಿಕರಾಗಿ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ.
ಕಿರಣ್ ಪಾಟೀಲ್ ಅವರು ಗಂಗಾವತಿಯ ಕುವೆಂಪು ಬಡಾವಣೆಯ ನಿವಾಸಿ. ಕಳೆದ ಡಿಸೆಂಬರ್ನಲ್ಲಿ ಐಶ್ವರ್ಯ ಮತ್ತು ಕಿರಣ್ ಪಾಟೀಲ್ಗೆ ವಿವಾಹವಾಗಿದ್ದರು. ಇಬ್ಬರೂ ದುಬೈನಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಕಾಗ್ನಿಜೆಂಟ್ ಟೆಕ್ನಾಲಜಿ ಸೆಲ್ಯೂಷನ್ ಎಂಬ ಖಾಸಗಿ ಕಂಪೆನಿಯಲ್ಲಿ ಐಶ್ವರ್ಯ ಗೌಡರ್ ಪ್ರೊಸೆಸಿಂಗ್ ಸ್ಪೆಷಲಿಸ್ಟ್ ಆಗಿದ್ದರೆ, ಕಿರಣ್ ಪಾಟೀಲ್ ಅಡ್ವಾನ್ಸ್ ವಾಟರ್ ಟೆಕ್ ಎಂಬ ಖಾಸಗಿ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಎಪಿಎಂಸಿ ಮುಂದಿರುವ ಟಿಎಪಿಸಿಎಂಎಸ್ನ ಮತಗಟ್ಟೆಯಲ್ಲಿ ಐಶ್ವರ್ಯ ಮತದಾನ ಮಾಡಲಿದ್ದು, ಬೆಂಡರವಾಡಿಯ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಕಿರಣ್ ಪಾಟೀಲ್ ವೋಟ್ ಹಾಕಲಿದ್ದಾರೆ.
"ಭಾರತ ಬದಲಾಗುತ್ತಿದೆ. ಅಭಿವೃದ್ಧಿಗೆ ವೇಗ ಸಿಕ್ಕಿದೆ. ವಿದೇಶಗಳಲ್ಲೂ ನಮ್ಮ ದೇಶದ ಬಗ್ಗೆ ಗೌರವಭಾವ ಮೂಡಿದೆ. ಭಾರತದ ಪ್ರಜೆಗಳೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಅನ್ನಿಸುತ್ತಿದೆ" ಎಂದು ದಂಪತಿ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಎರಡನೇ ಹಂತದ ಮತದಾನ: ಬಾಗಲಕೋಟೆಯಲ್ಲಿ ಸಕಲ ಸಿದ್ಧತೆ - ಜಿಲ್ಲೆಯಾದ್ಯಂತ 1946 ಮತಗಟ್ಟೆ ಸ್ಥಾಪನೆ - second phase polling