ರಾಮನಗರ: ಮಾಗಡಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಎಲ್ಲ ರೀತಿಯ ಸಹಕಾರ, ಬೆಂಬಲ ಕೊಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಮಾಗಡಿ ತಾಲೂಕಿನಲ್ಲಿಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ನೂತನವಾಗಿ ನಿರ್ಮಾಣಗೊಂಡಿರುವ ಬೆಂಗಳೂರು ಹಾಲು ಒಕ್ಕೂಟದ ಮಾಗಡಿ ನೂತನ ಶಿಬಿರ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರಿನ ಹೊರವಲಯದಲ್ಲಿರುವ ಮಾಗಡಿ ಬಹಳ ಪ್ರಮುಖ ಪಟ್ಟಣ. ಕೆಂಪೇಗೌಡರ ರಾಜಧಾನಿಯಾಗಿದ್ದ ನಗರ. ಮಾಗಡಿ ಅಭಿವೃದ್ಧಿಯಾಗಬೇಕು ಎನ್ನುವ ವಾದದಲ್ಲಿ ನನ್ನ ಸಹಮತವೂ ಇದೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಆಚರಣೆಗೆ ಪ್ರಾಧಿಕಾರ ರಚನೆ ಮಾಡಲಾಯಿತು. ಇದರ ಉದ್ದೇಶ ಕೆಂಪೇಗೌಡರನ್ನು ಎಲ್ಲರೂ ಸ್ಮರಿಸಬೇಕು ಎನ್ನುವುದಾಗಿತ್ತು. ಒಕ್ಕಲಿಗರ ನಾಯಕರು ಎಂದು ಹೇಳಿಕೊಳ್ಳುವವರು ಇದನ್ನು ಮಾಡಲಿಲ್ಲ. ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದ್ದು, ಅವರ ಜಯಂತ್ಯೋತ್ಸವವನ್ನು ಆಚರಿಸುವುದು ಸರ್ಕಾರದ ಕರ್ತವ್ಯ ಎಂದು ಭಾವಿಸಿ 2016-17 ರಲ್ಲಿ ಆಚರಣೆ ತಂದಿದ್ದು ನಮ್ಮ ಸರ್ಕಾರ ಎಂದು ಸ್ಮರಿಸಿದರು.
ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ: ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಮೇಲೆ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ವಿರೋಧ ಪಕ್ಷದವರು ಆರೋಪಿಸುತ್ತಿದ್ದಾರೆ. ಹಾಗಾದರೆ ಅಭಿವೃದ್ಧಿ ಕೆಲಸಗಳಿಗೆ 120 ಕೋಟಿ ರೂ.ಗಳನ್ನು ಅನುದಾನವನ್ನು ಏಕೆ ಮೀಸಲಿಡಲಾಗಿದೆ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಹಾಲಿಗೆ ಬೆಲೆ ಏರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದರು, ರೈತರಿಗೆ ಹಣ ಸೇರಬೇಡವೇ? ರೈತರಿಗೆ ಇದನ್ನು ಪ್ರಶ್ನಿಸಲು ಸಾಧ್ಯವಿಲ್ಲವೇ ಎಂದು ಕೇಳಿದರು. ಹಾಲಿಗೆ 5 ರೂ.ಗಳ ಪ್ರೋತ್ಸಾಹಧನ ಘೋಷಿಸಿದ್ದು ನಮ್ಮ ಸರ್ಕಾರ. ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಏನೂ ಮಾಡದೇ ರೈತರ ಮಕ್ಕಳು, ಮಣ್ಣಿನ ಮಕ್ಕಳು ಎನ್ನುತ್ತಾರೆ ಎಂದು ಪರೋಕ್ಷವಾಗಿ ವಿಪಕ್ಷ ನಾಯಕರನ್ನು ಟೀಕಿಸಿದರು.
ದೇಶದ ಸಾಲ 182 ಲಕ್ಷ ಕೋಟಿಗೆ ತಲುಪಿದೆ: ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ರಾಜ್ಯದ ಸುಮಾರು 1.20 ಲಕ್ಷ ಕುಟುಂಬಗಳಿಗೆ ವಾರ್ಷಿಕವಾಗಿ 50 ರಿಂದ 60 ಸಾವಿರ ರೂ.ಗಳ ಆರ್ಥಿಕ ಸಹಾಯವನ್ನು ಗ್ಯಾರಂಟಿಗಳ ಮೂಲಕ ಒದಗಿಸಲಾಗುತ್ತಿದೆ. ಭಾರತದ ಮೇಲಿನ ಸಾಲ 182 ಲಕ್ಷ ಕೋಟಿಯನ್ನು ಮೀರುತ್ತಿದೆ. ಹಿಂದೆ ಸಾಲದ ಮೊತ್ತ 53.11 ಲಕ್ಷ ಕೋಟಿ ಇದ್ದ ಸಾಲದ ಮೊತ್ತ ಈಗ ಕಳೆದ 10 ವರ್ಷದಲ್ಲಿ 182 ಲಕ್ಷ ಕೋಟಿ ರೂ.ಗೆ ತಲುಪಿದೆ. ಗರೀಬಿ ಹಠಾವೋ, ಆಹಾರ ಸ್ವಾವಲಂಬನೆಯಂತ ಜನಪರ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟಿದೆ ಎಂದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಅನುದಾನವನ್ನು ಬೇರೆಯವರಿಗೆ ನೀಡಲಾಗಿದೆ ಎಂದು ವಿಪಕ್ಷ ನಾಯಕರು ಸುಳ್ಳು ನುಡಿದರು. ಆದರೆ 89.62 ಕೋಟಿ ಮೊತ್ತದ ಅವ್ಯವಹಾರವಾಗಿದ್ದು, ಅದರಲ್ಲಿ 56 ಕೋಟಿ ವಸೂಲು ಮಾಡಲಾಗಿದೆ. ಆದರೂ ಅಭಿವೃದ್ಧಿ ನಿಗಮಕ್ಕೆ ಈ ಮುಂಚೆ ನಿಗದಿಪಡಿಸಿರುವಂತೆ ಅನುದಾನವನ್ನು ನೀಡಿ, ಸಮುದಾಯದ ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದರು.