ಹುಬ್ಬಳ್ಳಿ: ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯ ವಿದ್ಯಾರ್ಥಿನಿ ಎ.ವಿದ್ಯಾಲಕ್ಷ್ಮಿ ಅವರು 598 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ರ‍್ಯಾಂಕ್ ಬಂದಿದ್ದಾರೆ. ಇವರು ಇಲ್ಲಿನ ಬೈರೇದೇವರಕೊಪ್ಪದ ಚೌಗುಲ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ. ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದರು.
ವಿದ್ಯಾಲಕ್ಷ್ಮಿ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶೇ.97ರಷ್ಟು ಅಂಕ ಪಡೆದಿದ್ದರು. ಇವರ ತಂದೆ ಎಸ್.ಅಖಿಲೇಶ್ವರನ್ ಹಿರಿಯ ಸೆಕ್ಷನ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಕೃತಿಕಾ ಗೃಹಿಣಿ. ಮೂಲತಃ ತಮಿಳುನಾಡಿನರಾದ ಇವರು 2002ರಿಂದ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ.
ತಮ್ಮ ಸಾಧನೆಯ ಕುರಿತು ಎ.ವಿದ್ಯಾಲಕ್ಷ್ಮಿ ಮಾತನಾಡಿ, "ರ‍್ಯಾಂಕ್ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ. ನಿರಂತರ ಕಠಿಣ ಪರಿಶ್ರಮವೇ ಈ ಸಾಧನೆಗೆ ಕಾರಣ. ಕಾಲೇಜಿನಲ್ಲಿ ಹಾಗೂ ಮನೆಯಲ್ಲಿ ನಿರಂತರ ಓದು ಅನುಕೂಲವಾಯಿತು. ರಜಾ ದಿನಗಳನ್ನು ಹೆಚ್ಚು ಸದುಪಯೋಗಪಡಿಸಿಕೊಂಡೆ. ಕಾಲೇಜಿನ ಸಿಬ್ಬಂದಿ ಹಾಗೂ ಪೋಷಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದೆ ವೈದ್ಯೆಯಾಗುವ ಆಸೆ ಇದೆ" ಎಂದರು.
ತಾಯಿ ಕೃತಿಕಾ ಮಾತನಾಡಿ, "ಮಗಳ ಸಾಧನೆ ಖುಷಿ ಕೊಟ್ಟಿದೆ. ನಿರಂತರ ಅಭ್ಯಾಸ ಮಾಡುತ್ತಿದ್ದಳು. ಇದರಿಂದ ಸಾಧನೆ ಸಾಧ್ಯವಾಗಿದೆ" ಎಂದು ಖುಷಿ ಹಂಚಿಕೊಂಡರು.
ಕಾಲೇಜಿನ ಮುಖ್ಯಸ್ಥ ಅನಿಲಕುಮಾರ್ ಚೌಗಲಾ ಮಾತನಾಡಿ, "ನಮ್ಮ ಕಾಲೇಜಿನ ವಿದ್ಯಾರ್ಥಿನಿ ಎ. ವಿದ್ಯಾಲಕ್ಷ್ಮಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಮಹಾವಿದ್ಯಾಲಯ, ಅವರ ಪಾಲಕರಿಗೆ, ಧಾರವಾಡ ಜಿಲ್ಲೆಯ ಹಿರಿಮೆ-ಗರಿಮೆ ಹೆಚ್ಚಿಸಿದ್ದಾರೆ. ಹಿಂದಿಯೊಂದನ್ನು ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದ ಹೆಗ್ಗಳಿಕೆ ಅವರದ್ದು" ಎಂದರು.
ಇದೇ ಕಾಲೇಜಿನ ಆದಿತ್ಯಾ ಅವಸೇರಕರ (594) ಮತ್ತು ಸಹನಾ ಇಳಗೇರ (594) 5ನೇ ರ‍್ಯಾಂಕ್, ಕೃಪಾ ವಡೊನಿ (593) ಹಾಗೂ ಸಂಕಲ್ಪ ಕುಂತೆ (593) 6ನೇ ರ‍್ಯಾಂಕ್, ಅನಿರುದ್ಧ ಕುಲಕರ್ಣಿ (591), ಶ್ರೇಯಾ ಗೌಡರ್ (591) ಹಾಗೂ ವೈಷ್ಣವಿ ಕುರಿ (591) 8ನೇ ರ‍್ಯಾಂಕ್, ಕಿರಣ ತೊಳೆ (590) ಮತ್ತು ಸಮೀದ್ ಟಕ್ಕೆ (590) 9ನೇ ರಾಂಕ್, ರಮ್ಯಾ ಕಾಕೋಳ (589) ಮತ್ತು ಸಾಗರ ಗೌರನ್ನವರ (589) 10ನೇ ರ‍್ಯಾಂಕ್ ಗಳಿಸಿದ್ದಾರೆ.
ಚೌಗಲಾ ಶಿಕ್ಷಣ ಸಂಸ್ಥೆಯ ಪರವಾಗಿ ವಿದ್ಯಾರ್ಥಿನಿ ಎ.ವಿದ್ಯಾಲಕ್ಷ್ಮಿಗೆ ಒಂದು ಲಕ್ಷ ರೂಪಾಯಿ ಹಣ ಕಾಣಿಕೆಯಾಗಿ ನೀಡಲಾಗಿದೆ. ಕಾಲೇಜಿನ ಪ್ರಾಚಾರ್ಯ ಡಾ.ಆನಂದ ಮುಳಗುಂದ, ಕಾರ್ಯದರ್ಶಿ ಶ್ರೀದೇವಿ ಚೌಗಲಾ, ಗಂಗಾಧರ ಕುಮಡೊಳ್ಳಿ, ಡಾ.ರಮೇಶ ಬಂಡಿವಾಡ ಉಪಸ್ಥಿತರಿದ್ದರು.
ಇದನ್ನೂ ಓದಿ: ದ್ವಿತೀಯ ಪಿಯುಸಿಯಲ್ಲಿ ಈ ಬಾರಿ ಇವರೇ ನೋಡಿ ಟಾಪರ್ಸ್; ಹೀಗಿದೆ ಡಿಟೇಲ್ಸ್ - 2nd PUC Toppers