ಶಿವಮೊಗ್ಗ: 'ಗಂಗಾ ಸ್ನಾನ ತುಂಗಾ ಪಾನ' ಅಂತ ಗಾದೆ ಮಾತಿದೆ. ಆದ್ರೆ, ತುಂಗಾ ನದಿಯ ನೀರು ಕುಡಿಯಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಇತ್ತು. ಕಾರಣವೇನೆಂದ್ರೆ, ಶಿವಮೊಗ್ಗದ ಜನರು ಪ್ರತಿನಿತ್ಯ ತುಂಗಾ ನದಿಯಲ್ಲಿ ಕಸ ಎಸೆದು ಮಲಿನ ಮಾಡುತ್ತಿದ್ದರು. ಒಂದು ಕಾಲದಲ್ಲಿ ತುಂಗಾ ನದಿಯನ್ನು ಪವಿತ್ರ ದೇವರೆಂದು ಭಾವಿಸಿದ್ದ ಜನ ಇಂದು ಅದೇ ನದಿಗೆ ತಮ್ಮ ದಿನ ನಿತ್ಯದ ಗಲೀಜು ಹಾಗೂ ತ್ಯಾಜ್ಯವನ್ನು ಹಾಕುತ್ತಿದ್ದಾರೆ. ಇದರಿಂದ ತುಂಗಾ ನದಿ ಒಂದು ರೀತಿ ಕಸದ ತೂಟ್ಟಿಯಾಗಿ ಪರಿಣಾಮಿಸುತ್ತಿದೆ.
ತುಂಗಾ ನದಿಯು ಶಿವಮೊಗ್ಗದ ನಗರದ ಮಧ್ಯೆ ಹಾದು ಹೋಗುತ್ತಿರುವುದರಿಂದ ಇಲ್ಲಿನ ಸೇತುವೆ ಮೇಲಿಂದ ಸಾರ್ವಜನಿಕರು ದೇವರಿಗೆ ಬಳಸಿದ ಹೂವು, ದೇವರ ಕಾರ್ಯಗಳಿಗೆ ಬಳಸಿದ ವಸ್ತುಗಳನ್ನು ನದಿಗೆ ಹಾಕುತ್ತಾರೆ. ಇನ್ನೂ ಅನೇಕರು ತಮ್ಮ ಮನೆಯ ಎಲ್ಲಾ ಕಸವನ್ನು ಸಹ ನದಿಗೆ ಹಾಕುತ್ತಿದ್ದಾರೆ. ಇದರಿಂದ ತುಂಗಾ ನದಿ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿದೆ. ತುಂಗಾ ನದಿ ಮಲಿನವಾಗುವುದನ್ನು ತಡೆಯಲು ಶಿವಮೊಗ್ಗ ಮಹಾನಗರ ಪಾಲಿಕೆಯು ನಗರದಲ್ಲಿ ಹಾದು ಹೋಗುವ ನದಿಯ ನಾಲ್ಕು ಸೇತುವೆಗಳಿಗೂ ಈಗ ಕಬ್ಬಿಣದ ತಡೆಗೋಡೆಗಳನ್ನು ನಿರ್ಮಿಸಲು ಮುಂದಾಗಿದೆ.
ಇದಕ್ಕಾಗಿ ನಗರದ ಬೆಕ್ಕಿನ ಕಲ್ಮಠದ ಬಳಿಯ ಹೊಸ ಸೇತುವೆಗೆ ಈಗ ಎರಡು ಕಡೆ ಕಬ್ಬಿಣದ ತಡೆಗೋಡೆ ನಿರ್ಮಿಸಲಾಗುತ್ತಿದೆ. ಕಬ್ಬಿಣದ ತಡೆಗೋಡೆಗೆ ಮೆಶ್ ಅನ್ನು ಅಳವಡಿಸಿ, ಅಲ್ಲಿಂದ ಕಸವನ್ನು ಯಾರು ಸಹ ಹಾಕದಂತೆ ತಡೆಯಲಾಗುತ್ತಿದೆ. ಸೇತುವೆಯ ಮೇಲೆ ಸುಮಾರು 10 ಅಡಿ ಎತ್ತರದ ಮೆಶ್ ತಡೆಗೋಡೆ ಮಾಡಲು ಪ್ರಾರಂಭಿಸಿದೆ. ಇದರಿಂದ ಮುಂದೆ ನದಿಗೆ ಕಸ ಹಾಕುವುದನ್ನು ಇದು ತಡೆಯಬಹುದಾಗಿದೆ.
ತಡೆಗೋಡೆ ಕುರಿತು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡ ಪ್ರತಿಕ್ರಿಯಿಸಿ, ''ತುಂಗಾ ನದಿಯು ನಮ್ಮ ನಗರದ ಹೃದಯ ಭಾಗದಲ್ಲಿ ಹಾದು ಹೋಗುತ್ತದೆ. ನದಿಗೆ ಅನೇಕ ಜನರು ಮನೆಯ ಪೂಜಾ ವಸ್ತುಗಳು ಸೇರಿದಂತೆ ಕೋಳಿ ತ್ಯಾಜ್ಯವನ್ನು ನದಿಗೆ ಹಾಕುತ್ತಿದ್ದರು. ತುಂಗಾ ನದಿಯನ್ನು ಶುದ್ಧವಾಗಿಟ್ಟುಕೊಂಡು ಅದರ ಪಾವಿತ್ರ್ಯತೆಯನ್ನು ಕಾಪಾಡಲು ಮಹಾನಗರ ಪಾಲಿಕೆಯು ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಈಗಾಗಲೇ ನಗರದ ಕೊಳಚೆ ನೀರು ಸೇರಿದಂತೆ ಚರಂಡಿ ನೀರನ್ನು ಶುದ್ಧೀಕರಿಸಿ ನದಿಗೆ ಬಿಡುವ ಕೆಲಸವನ್ನು ಮಾಡಲಾಗುತ್ತಿದೆ. ಅಲ್ಲದೆ ನದಿಯ ಎರಡು ಕಡೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ.
ಇದರ ಮುಂದಿನ ಭಾಗವಾಗಿ ನದಿಗೆ ಸೇತುವೆಯ ಮೇಲಿಂದ ಬಿಳುವ ಕಸವನ್ನು ತಡೆಯಲು ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ನಗರದ ಮಧ್ಯಭಾಗದಲ್ಲಿ ಇರುವ ಎರಡು ಸೇತುವೆ ಹಾಗೂ ಬೈಪಾಸ್ ರಸ್ತೆಯ ಎರಡು ಸೇತುವೆ ಸೇರಿ ಒಟ್ಟು ನಾಲ್ಕು ಸೇತುವೆಗಳಿಗೂ ಸಹ ಪಾಲಿಕೆ ತಡೆಗೋಡೆ ನಿರ್ಮಾಣ ಮಾಡುತ್ತದೆ'' ಎಂದು ತಿಳಿಸಿದ್ದಾರೆ.
ಮಹಾನಗರ ಪಾಲಿಕೆ ವತಿಯಿಂದ ಸೇತುವೆಗಳಿಗೆ ತಡೆಗೋಡೆ ನಿರ್ಮಾಣ ಮಾಡುತ್ತಿರುವ ಕುರಿತು ಶಿವಮೊಗ್ಗ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪರಿಸರವಾದಿ ವಿಜಯ ಕುಮಾರ್ ಮಾತನಾಡಿ, ''ಈ ಹಿಂದೆ ತುಂಗಾ ನದಿ ಉಳಿಸಿ ಎಂದು ಹೋರಾಟವನ್ನು ಅನೇಕ ಪರಿಸರವಾದಿಗಳು ನಡೆಸಿದ್ದರು. ನದಿಗೆ ಸೇತುವೆ ಮೇಲಿಂದ ಅನೇಕರು ತಮ್ಮ ಮನೆಯ ತ್ಯಾಜ್ಯ, ದೇವರ ಪೂಜಾ ವಸ್ತುಗಳು ಸೇರಿದಂತೆ ಅನೇಕ ರೀತಿಯ ಗಲೀಜುಗಳನ್ಜು ನದಿಗೆ ಹಾಕುತ್ತಿದ್ದರು. ಈಗ ತಡೆಗೋಡೆಯಿಂದ ನದಿಯ ಮಲಿನವಾಗುವುದನ್ನು ತಡೆಯಬಹುದಾಗಿದೆ'' ಎಂದು ತಿಳಿಸಿದ್ದಾರೆ.
ನಗರದ ನಿವಾಸಿ ನಾಗರಾಜ್ ಮಾತನಾಡಿ, ''ನದಿಗೆ ಸೇತುವೆ ಮೇಲಿಂದ ಕೋಳಿ ತ್ಯಾಜ್ಯ ಸೇರಿದಂತೆ ಅವರು ಮನೆಯಲ್ಲಿ ಊಟ ಮಾಡಿ ಬಿಸಾಡುವ ವಸ್ತುಗಳನ್ನು ಸಹ ಇಲ್ಲಿಗೆ ತಂದು ಹಾಕುತ್ತಿದ್ದರು. ಈಗ ಸೇತುವೆ ಮೇಲೆ ನಿರ್ಮಾಣವಾಗುತ್ತಿರುವ ತಡೆಗೋಡೆಯಿಂದ ನದಿಯು ಶುದ್ಧವಾಗಿರುತ್ತದೆ'' ಹೇಳಿದರು.
ಇದನ್ನೂ ಓದಿ: ಬಿತ್ತನೆ ಬೀಜ - ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿದೆ, ರೈತರು ಆತಂಕ ಪಡುವ ಅಗತ್ಯ ಇಲ್ಲ: ಕೃಷಿ ಸಚಿವ - Chaluvarayaswamy