ಹುಬ್ಬಳ್ಳಿ/ಧಾರವಾಡ: ನಗರದ ಮಯೂರ ಎಸ್ಟೇಟ್ನಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿವಾಸಕ್ಕೆ ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದರು. ಬಿಜೆಪಿಯಲ್ಲಿನ ಭಿನ್ನಮತದ ಹಿನ್ನೆಲೆಯಲ್ಲಿ ಜೋಶಿ ಮತ್ತು ವಿಜಯೇಂದ್ರ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ಭೇಟಿ ಬಳಿಕ ಮಾತನಾಡಿದ ವಿಜಯೇಂದ್ರ, ಜೋಶಿ ಭೇಟಿಗೆ ವಿಶೇಷ ಮಹತ್ವ ಇಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾದ ಮಾಜಿ ಸಚಿವರು ಸೇರಿದಂತೆ ಇನ್ನಿತರರನ್ನು ಉಳಿಸುವ ಕಾರ್ಯವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಈಗಾಗಲೇ ಎಸ್ಐಟಿ ಚಾರ್ಜ್ ಸೀಟ್ನಲ್ಲಿಯೂ ನಾಗೇಂದ್ರ ಹಾಗೂ ದದ್ದಲ್ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯನವರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡದೇ ಇಲ್ಲ ಎಂಬ ದಾಟಿಯಲ್ಲಿ ಮಾತನಾಡಿದ್ದಾರೆ. ಅಲ್ಲದೇ ಮುಡಾ ಹಗರಣದಲ್ಲಿ ಕಾನೂನು ಬಾಹಿರವಾಗಿ ಸಿಎಂ ಅವರ ಧರ್ಮ ಪತ್ನಿಯ ಹೆಸರಿನಲ್ಲಿ ನಿವೇಶನಗಳನ್ನು ಪಡೆದಿದ್ದಾರೆ. ಬಡವರ ಪಾಲಿಗೆ ಬರಬೇಕಿದ್ದ ಮುಡಾ ನಿವೇಶನಗಳನ್ನು ಲೂಟಿ ಮಾಡಿರುವುದು ಖಂಡನೀಯವಾಗಿದೆ. ನೈತಿಕತೆಯಿದ್ದರೇ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇನ್ನೂ ಐದು ಸಾವಿರ ಕೋಟಿಗೂ ಅಧಿಕ ಬೆಲೆಯ ಮುಡಾ ನಿವೇಶನದಲ್ಲಿ ಅವ್ಯವಹಾರ ಆಗಿದ್ದು, ಈ ಹಗರಣದ ತನಿಖೆಯನ್ನು ಸಿದ್ದರಾಮಯ್ಯನವರು ಸಿಬಿಐಗೆ ವಹಿಸಬೇಕಿದೆ. ಯಾವುದೇ ಅವ್ಯವಹಾರ ಮಾಡಿಲ್ಲ ಎಂದಾದರೇ ಸಿಬಿಐಗೆ ನೀಡಿ ಎಂದು ಒತ್ತಾಯಿಸಿದರು.
ಗುಂಡೂರಾವ್ಗೆ ವಿಜಯೇಂದ್ರ ಟಾಂಗ್: ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಗಟ್ಟಿಯಾದ ಧ್ವನಿ ಎತ್ತಿರುವುದಕ್ಕೆ ಈ ತರಹದ ಆರೋಪಗಳು ಬಂದಿವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿರುಗೇಟು ನೀಡಿದರು. ಯಡಿಯೂರಪ್ಪ ಕುಟುಂಬದ ವಿರುದ್ಧ ಬಂದಿರುವ ಆರೋಪಗಳಿಗೆ ಕೋರ್ಟ್ನಲ್ಲಿಯೇ ನ್ಯಾಯ ಸಿಕ್ಕಿದೆ. ಈ ನಿಟ್ಟಿನಲ್ಲಿ ಯಾವುದೇ ಆರೋಪಗಳಿಗೆ ಟೀಕೆಗಳಿಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ ಎಂದರು.
ಕುಮಾರಸ್ವಾಮಿ ಕೇಳಗಿಳಿಸುವ ಹುನ್ನಾರ ಎಂಬ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಯಾವುದೇ ಕಾರಣಕ್ಕೂ ಕುಮಾರಸ್ವಾಮಿಯವರನ್ನು ಹತ್ತಿಕುವ ಹಾಗೂ ಕೆಳಗಿಸುವ ಕಾರ್ಯವನ್ನು ಮಾಡಿಲ್ಲ. ಅಲ್ಲದೇ ನಮ್ಮಲ್ಲಿ ಸ್ಪಷ್ಟತೆ ಇದೆ. ಹಾಗೇ ಏನಾದರೂ ಇದ್ದರೇ ಬಿಜೆಪಿ ಪಾದಯಾತ್ರೆಗೆ ಕುಮಾರಸ್ವಾಮಿಯವರು ಯಾಕೆ ಬರಬೇಕಿತ್ತು ಎಂದು ಪ್ರಶ್ನಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿಯೇ ಲೋಕಸಭಾ ಚುನಾವಣೆ ಎದುರಿಸಿದ್ದೇವೆ. ಅಲ್ಲದೇ ಕೇಂದ್ರದಲ್ಲಿ ಅಧಿಕಾರಕ್ಕೂ ಬಂದಿದ್ದೇವೆ. ಮುಂದೆಯೂ ಒಟ್ಟಾಗಿಯೇ ಮುನ್ನಡೆಯಬೇಕೆಂಬ ಅಪೇಕ್ಷೆಯಿದೆ ಎಂದು ವಿಜಯೇಂದ್ರ ಹೇಳಿದರು.
ಸಿಎಂ ರಾಜೀನಾಮೆ ಕೊಡ್ತಾರೆ: ಸಿಎಂ ಸಿದ್ದರಾಮಯ್ಯ ಸರ್ಕಾರ ಆತುರದಲ್ಲಿದೆ. ನನಗೆ ಇರುವ ಮಾಹಿತಿ ಪ್ರಕಾರ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟೇ ಕೊಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಹಿತಿ ನೀಡಿದರು. ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡನಲ್ಲಿ ಕೂಡಾ ಸಿದ್ಧರಾಮಯ್ಯ ಅವರ ರಾಜೀನಾಮೆ ಪಡೆಯಬೇಕು ಎಂದು ತೀರ್ಮಾನ ಆಗಿದೆ ಎಂದು ಮಾಹಿತಿ ಇದೆ. ಇವರು ಆತುರದಲ್ಲಿ ಎಲ್ಲ ನಿರ್ಧಾರ ಮಾಡುತ್ತಿದ್ದಾರೆ ಎಂದರು.
ಭ್ರಷ್ಟಾಚಾರ ಇಲ್ಲದೇ ಆಡಳಿತ ಕೊಡಲು ಅಸಾಧ್ಯ. ಹಿಂದಿನಿಂದಲೂ ನಾವು ಹೇಳಿದ್ವಿ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇವರನ್ನು ಎಟಿಎಂ ಆಗಿ ಪರಿವರ್ತನೆ ಮಾಡಬೇಕು ಎಂದು ಇತ್ತು. ಇದು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಇರುವ ಉದ್ದೇಶ. ನಾವು ಆರೋಪ ಮಾಡುತಿದ್ದೇವೆ ಎಂದು ಎಲ್ಲರೂ ಭಾವಿಸಿದ್ದರು. ಈಗ ಅದಕ್ಕೆ ಪುರಾವೆ ಸಿಕ್ಕಿವೆ. ರಾಜ್ಯದಲ್ಲಿ ಆಡಳಿತ ಕುಸಿದಿದೆ. ಅಭಿವೃದ್ಧಿ ಆಗಲೇ ಇಲ್ಲ. ಅಭಿವೃದ್ಧಿ ಚಾಲನೆ ಕೂಡಾ ಸಿಎಂ ಕೊಟ್ಟಿಲ್ಲ ಎಂದು ಹರಿಹಾಯ್ದರು.
ರಾಜ್ಯದ ರೈತರಿಗೆ, ಬಡವರಿಗೆ ಈ ಸರ್ಕಾರ ಶಾಪವಾಗಿ ಪರಿಣಮಿಸಿದೆ. ಇಂತ ಭ್ರಷ್ಟ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡುತ್ತ ಬಂದಿದ್ದೇವೆ. ಇದರಿಂದಾಗಿಯೇ ಸಚಿವ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಂ ಅವರೇ ಹಗರಣದಲ್ಲಿ ಭಾಗಿಯಾಗಿದ್ದಾರೆ. ಇಂದಲ್ಲಾ ನಾಳೆ ಅವರೂ ರಾಜೀನಾಮೆ ಕೊಡ್ತಾರೆ. ಸಿಎಂ ಜಿಂದಾಲ್ ಅಷ್ಟೇ ಅಲ್ಲ, ಬೆಂಗಳೂರು ಟನಲ್ಗಾಗಿ 14 ಸಾವಿರ ಕೋಟಿ ಎಂದು ಹೇಳ್ತಾರೆ. ಆದರೆ ಅದು 30 ರಿಂದ 40 ಸಾವಿರ ಕೋಟಿಯ ಟನಲ್ ಇದೆ ಎಂದು ನನಗೆ ಮಾಹಿತಿ ಇದೆ ಎಂದರು.