ಬೆಂಗಳೂರು: ನೀಟ್ ಫಲಿತಾಂಶದಲ್ಲಿ ಭಾರೀ ಅಕ್ರಮ ನಡೆದಿರುವ ಶಂಕೆ ದೇಶಾದ್ಯಂತ ವ್ಯಕ್ತವಾಗುತ್ತಿದೆ. ಪರೀಕ್ಷೆ ಬರೆದಿರುವ 24 ಲಕ್ಷ ವಿದ್ಯಾರ್ಥಿಗಳು, ಅವರ ಪೋಷಕರಲ್ಲಿ ಆತಂಕ ಮೂಡಿದೆ. ಪರೀಕ್ಷೆಯ ವಿಶ್ವಾಸಾರ್ಹತೆ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಎನ್‌ಟಿಎ ಆಗಲೀ, ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರವಾಗಲೀ ಉತ್ತರಿಸದೆ ಲಕ್ಷಾಂತರ ಯುವಜನರ ಭವಿಷ್ಯವನ್ನು ಮಣ್ಣುಪಾಲು ಮಾಡಲು ಹೊರಟಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ನೀಟ್ (NEET)ನಲ್ಲಿ 67 ಅಭ್ಯರ್ಥಿಗಳಿಗೆ 720ಕ್ಕೆ 720 ಅಂಕಗಳು ಬಂದಿವೆ. ಅಂದರೆ 100% ಅಂಕಗಳು ಬಂದಿದೆ. ಆದರೆ ಈ ಹಿಂದಿನ ವರ್ಷಗಳಲ್ಲಿ ಬಂದ ಟಾಪರ್ಗಳ ಸಂಖ್ಯೆ ಎಷ್ಟು? ಎಂಬುದನ್ನು ಹೋಲಿಕೆ ಮಾಡಿ ನೋಡಿದರೆ ಈ ಬಾರಿಯ ಫಲಿತಾಂಶದಲ್ಲಿ ಅಕ್ರಮದ ವಾಸನೆ ಬಡಿಯುತ್ತದೆ.
2019ರಲ್ಲಿ ಒಬ್ಬ ವಿದ್ಯಾರ್ಥಿ, 2020ರಲ್ಲಿ ಒಬ್ಬ, 2021ರಲ್ಲಿ ಮೂವರು, 2022ರಲ್ಲಿ ಒಬ್ಬ, 2023ರಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಪ್ರತಿಶತ ಅಂಕ ಪಡೆದಿದ್ದರು. ಈ ವರ್ಷ – 67 ವಿದ್ಯಾರ್ಥಿಗಳು ಟಾಪರ್ಗಳಾಗಿ ಹೊರಹೊಮ್ಮಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಪ್ರತೀ ತಪ್ಪು ಉತ್ತರಕ್ಕೆ ಋಣಾತ್ಮಕ ಅಂಕಗಳಿರುವ ಕಾರಣ ಇಷ್ಟೊಂದು ಮಂದಿ ನೂರು ಪ್ರತಿಶತ ಅಂಕ ಗಳಿಸುವುದು ಅಸಾಧ್ಯ ಎನ್ನಿಸುತ್ತದೆ. ಇದು ಕಾಕತಾಳೀಯವೋ ಅಥವಾ ಹೊಸ ಪ್ರಯೋಗವೋ?. ಇದನ್ನು ಮೋದಿ ಸರ್ಕಾರವೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಂದೇ ಪರೀಕ್ಷಾ ಕ್ಷೇಂದ್ರದ 6 ವಿದ್ಯಾರ್ಥಿಗಳು ಟಾಪರ್ಸ್: ನೀಟ್‌ನ 67 ಟಾಪರ್‌ಗಳಲ್ಲಿ 44 ಮಂದಿ 'ಗ್ರೇಸ್‌ಮಾರ್ಕ್' ಆಧಾರದ ಮೇಲೆ ಟಾಪರ್‌ಗಳಾಗಿದ್ದಾರೆ. ಗ್ರೇಸ್ ಅಂಕಗಳ ಆಧಾರದ ಮೇಲೆ ಇಷ್ಟೊಂದು ಪರೀಕ್ಷಾರ್ಥಿಗಳು ಟಾಪರ್‌ಗಳಾದಾಗ, "ಮಾರ್ಕಿಂಗ್ ಪ್ರಕ್ರಿಯೆ" ಮತ್ತು "ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಸಿಂಧುತ್ವ"ದ ಮೇಲೆ ಪ್ರಶ್ನೆ ಹುಟ್ಟುಹಾಕುವುದಿಲ್ಲವೆ?. ಇನ್ನೊಂದು ಅಚ್ಚರಿಯ ವಿಷಯವೇನೆಂದರೆ 62 ರಿಂದ 69 ರವರೆಗಿನ ಸರಣಿ ಸಂಖ್ಯೆಗಳೊಂದಿಗೆ ನೀಟ್ ಟಾಪರ್‌ಗಳು ಹರಿಯಾಣದ ಫರಿದಾಬಾದ್‌ನಲ್ಲಿರುವ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದವರು. ಈ ಪೈಕಿ 6 ಜನರು 720/720 ಅಂಕಗಳೊಂದಿಗೆ ನೀಟ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಮತ್ತು 718 ಮತ್ತು 719 ಅಂಕಗಳನ್ನು ಇಬ್ಬರು ಪಡೆದಿದ್ದಾರೆ. ಮೇಲ್ನೋಟಕ್ಕೆ ಪರೀಕ್ಷಾ ಅಕ್ರಮ ನಡೆದಿರುವುದು ಕಂಡುಬಂದರೂ ಎನ್‌ಟಿಎ ಮತ್ತು ಮೋದಿ ಸರ್ಕಾರ ಈ ಫಲಿತಾಂಶವನ್ನು ಸಮರ್ಥಿಸುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರವು ಚುನಾವಣಾ ಸೋಲಿನಿಂದಲೂ ಪಾಠ ಕಲಿತಂತೆ ಕಾಣುತ್ತಿಲ್ಲ ಎಂದು ಟೀಕಿಸಿದ್ದಾರೆ.
ಗ್ರೇಸ್ ಮಾರ್ಕ್ಸ್ನಿಂದ ಟಾಪರ್ಸ್: ಫರಿದಾಬಾದ್‌ನ ನೀಟ್ ಪರೀಕ್ಷಾ ಕೇಂದ್ರದಲ್ಲಿ ತಪ್ಪು ಪತ್ರಿಕೆಯನ್ನು ವಿತರಿಸಲಾಗಿತ್ತು. ಇದರಿಂದಾಗಿ ಅಭ್ಯರ್ಥಿಗಳು 45 ನಿಮಿಷಗಳನ್ನು ಕಳೆದುಕೊಳ್ಳವಂತಾಗಿತ್ತು. ಹಾಗಾಗಿ ಈ ಸಮಯಕ್ಕೆ ಪ್ರತಿಯಾಗಿ ಎನ್‌ಟಿಎ ಈ ಕೇಂದ್ರದ ಅಭ್ಯರ್ಥಿಗಳಿಗೆ 'ಗ್ರೇಸ್‌ಮಾರ್ಕ್' ನೀಡಿದೆ. ಇದು ನೂರು ಪ್ರತಿಶತ ಅಂಕ ಗಳಿಕೆಗೆ ಕಾರಣ ಎಂದು ಕೇಂದ್ರ ಸರ್ಕಾರ ಸಮಜಾಯಿಷಿ ನೀಡುತ್ತಿದೆ. "ಎನ್‌ಟಿಎ ಪ್ರಾಸ್ಪೆಕ್ಟಸ್", "ನೀಟ್ ಬ್ರೋಷರ್" ಮತ್ತು "ಸರ್ಕಾರಿ ಸೂಚನೆಗಳಲ್ಲಿ" ಈ ರೀತಿಯಲ್ಲಿ ಗ್ರೇಸ್ ಅಂಕಗಳನ್ನು ನೀಡುವ ಅವಕಾಶ ಇರುವ ಕುರಿತು ಯಾವುದೇ ಮಾಹಿತಿ ಇಲ್ಲ. ಹಾಗಾದರೆ ಈ ಗ್ರೇಸ್ ಮಾರ್ಕ್‌ಗಳನ್ನು ಯಾವ ಆಧಾರದ ಮೇಲೆ ನೀಡಲಾಗಿದೆ?. ಈ ಬಗ್ಗೆ ಮೋದಿ ಸರ್ಕಾರದಿಂದ ಸಾರ್ವಜನಿಕ ಸೂಚನೆ ಅಥವಾ ಜಾಹೀರಾತು ನೀಡಲಾಗಿದೆಯೇ?. ಬೇರೆ ಯಾವುದಾದರೂ ಕೇಂದ್ರದಲ್ಲಿ ಇದೇ ರೀತಿ ಗ್ರೇಸ್ ಮಾರ್ಕ್ಸ್ ನೀಡಲಾಗಿದೆಯೇ?. ಎಂಬಿತ್ಯಾದಿ ಮಾಹಿತಿಯನ್ನು ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅಂಕ ಮಿತಿ ಏರಿಕೆ: 2019 ರಿಂದ 2023ರವರೆಗೆ, ನೀಟ್ ಪರೀಕ್ಷೆಯಲ್ಲಿ 600 ಅಂಕಗಳನ್ನು ಗಳಿಸಿದವರು ಕೈಗೆಟುಕುವ ಶುಲ್ಕದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸುಲಭವಾಗಿ ಪ್ರವೇಶ ಪಡೆದಿದ್ದರು. ಈ ವರ್ಷ ನೀಟ್ ಪರೀಕ್ಷೆಯ ಅಂಕಮಿತಿಯು 137 ಅಂಕಗಳಿಂದ 164 ಕ್ಕೆ ಏರಿಕೆಯಾಗಿದೆ. ಈ ಬಾರಿ 660 ಅಂಕ ಗಳಿಸಿದ ಅಭ್ಯರ್ಥಿಗಳು ಮಾತ್ರ ಕೈಗೆಟಕುವ ಶುಲ್ಕದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು. ನೀಟ್ ಪರೀಕ್ಷೆಗೆ ಹಾಜರಾಗಿರುವ 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಹುತೇಕ ಬಡ-ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು. ವೈದ್ಯರಾಗುವ ಹಂಬಲ ಹೊಂದಿದವರು. ಆದರೆ ಈ ಪರೀಕ್ಷಾ ಗೊಂದಲದಿಂದಾಗಿ ಲಕ್ಷಾಂತರ ಯುವಕರ ಕನಸುಗಳು ನುಚ್ಚುನೂರಾಗಿದೆ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ನೀಟ್ ಪರೀಕ್ಷೆ: ಪ್ರಥಮ ಸ್ಥಾನ ಪಡೆದ ಮಂಗಳೂರಿನ ಅರ್ಜುನ್ ಕಿಶೋರ್ ಸಂತಸ - NEET TOPPER
ನಿಗದಿತ ವೇಳಾಪಟ್ಟಿಯಂತೆ ನೀಟ್ ಪರೀಕ್ಷೆಯನ್ನು ಮೇ 5, 2024 ರಂದು ನಡೆಸಲಾಯಿತು. ಫಲಿತಾಂಶವನ್ನು ಜೂನ್ 14, 2024 ರಂದು ಪ್ರಕಟವಾಗಬೇಕಿತ್ತು. ಆದರೆ ಇದ್ದಕ್ಕಿದ್ದಂತೆ ಫಲಿತಾಂಶವನ್ನು ಜೂನ್ 4, 2024 ರಂದು ಪ್ರಕಟಿಸಲಾಯಿತು. ಇದೇ ದಿನ ದೇಶದ ಸಂಸತ್ ಚುನಾವಣೆಯ ಫಲಿತಾಂಶ ಬಂದಿದ್ದು, ಇಡೀ ದೇಶವೇ ಲೋಕಸಭೆ ಚುನಾವಣೆಯ ಫಲಿತಾಂಶವನ್ನು ಕೇಳುವುದರಲ್ಲಿ ನಿರತವಾಗಿತ್ತು. ಈ ಗದ್ದಲದಲ್ಲಿ ನೀಟ್ ಫಲಿತಾಂಶವನ್ನು ತರಾತುರಿಯಲ್ಲಿ ಬಿಡುಗಡೆ ಮಾಡಿದ್ದು, ಪರೀಕ್ಷೆಯ ಅಕ್ರಮಗಳನ್ನು ಮುಚ್ಚಿಹಾಕಬಹುದು ಎಂಬ ಕಾರಣಕ್ಕಾಗಿಯೇ? ಅಲ್ಲದಿದ್ದರೆ ತರಾತುರಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ಮಾಡಿರುವ ಯಡವಟ್ಟಿನಿಂದಾಗಿ ನೀಟ್ ಫಲಿತಾಂಶ ಪ್ರಕಟವಾದ ನಂತರ ದೌಸಾದಲ್ಲಿ ಅಜಿತ್ ಎಂಬ ವಿದ್ಯಾರ್ಥಿ, ಮಧ್ಯಪ್ರದೇಶದ ರೇವಾ ಯುವತಿ ಬಗೀಶಾ ತಿವಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರೀಕ್ಷಾ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಮತ್ತು ನೊಂದ ಪರೀಕ್ಷಾರ್ಥಿಗಳ ಅಹವಾಲು ಆಲಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಿಎಂ ಆಗ್ರಹಿಸಿದ್ದಾರೆ.