ಬೆಂಗಳೂರು: ''ಬಳ್ಳಾರಿಯಲ್ಲಿ ಮತ್ತೊಂದು ಬಾಣಂತಿ ಮೃತರಾಗಿದ್ದಾರೆ. ಸಾವು ಏಕೆ ಸಂಭವಿಸಿದೆ ಎಂಬುದನ್ನು ಪರಿಶೀಲಿಸಲಾಗುವುದು'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನದ ನಿಮಿತ್ತ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ''ಪ್ರಕರಣದ ಬಗ್ಗೆ ಈಗಾಗಲೇ ಸಭೆ ನಡೆಸಿ, ಡ್ರಗ್ಸ್ ಕಂಟ್ರೋಲರ್ ಅವರನ್ನು ಅಮಾನತು ಮಾಡಲಾಗಿದೆ'' ಎಂದರು.
''ದೇಶದಲ್ಲಿ ಬಸವಣ್ಣ, ಬುದ್ಧನ ನಂತರ ಸಮಾನತೆಗಾಗಿ ಹೋರಾಡಿದವರು ಅಂಬೇಡ್ಕರ್ ಅವರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದು ಪುಷ್ಪಾರ್ಚನೆ ಮೂಲಕ ಅವರನ್ನು ಗೌರವಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಅಂಬೇಡ್ಕರ್ ಅವರು 1956ರ ಡಿಸೆಂಬರ್ 6ರಂದು ನಮ್ಮನ್ನೆಲ್ಲ ಅಗಲಿದರು. ಆ ದಿನವನ್ನೇ ಪರಿನಿರ್ವಾಣ ದಿನಾಚರಣೆ ಎಂದು ಆಚರಿಸಲಾಗುತ್ತದೆ'' ಎಂದು ಹೇಳಿದರು.
''ಅವರು ತಮ್ಮ ಬದುಕನ್ನು ಸಾಮಾಜಿಕ ಹೋರಾಟ ಹಾಗೂ ಸಮಾಜದ ಪರಿವರ್ತನೆಗಾಗಿ ತೊಡಗಿಸಿಕೊಂಡರು. ಅಂಬೇಡ್ಕರ್ ಅವರು ಈ ದೇಶ ಹಾಗೂ ನಮ್ಮ ಸಾಮಾಜಿಕ ಬದುಕಿಗೆ ಅಗತ್ಯವಾದ ಸಂವಿಧಾನವನ್ನು ಕೊಟ್ಟಿದ್ದಾರೆ. ಜಗತ್ತಿನಲ್ಲಿಯೇ ಶ್ರೇಷ್ಠ ಲಿಖಿತ ಸಂವಿಧಾನ ಎಂದು ನಮ್ಮ ಸಂವಿಧಾನ ಖ್ಯಾತಿ ಪಡೆದಿದೆ. ಸಂವಿಧಾನದ ಶ್ರೇಷ್ಠತೆ ತಿಳಿಯಬೇಕಾದರೆ ಒಳ್ಳೆಯವರ ಕೈಯಲ್ಲಿ ಅನುಷ್ಟಾನವಾಗಬೇಕು. ಕೆಟ್ಟವರ ಕೈಗೆ ಹೋದರೆ ಕೆಟ್ಟದಾಗುತ್ತದೆ ಎಂದು ಅಂಬೇಡ್ಕರ್ ಅವರು ಸ್ಪಷ್ಟವಾಗಿ ಈ ದೇಶದ ಜನರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದರು'' ಎಂದು ತಿಳಿಸಿದರು.
ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು: ''ಕೇವಲ ದಲಿತರಿಗೆ ಮಾತ್ರವಲ್ಲದೇ, ಎಲ್ಲರಿಗೂ ಸಾಮಾಜಿಕ ಅವಕಾಶ ದೊರಕಿಸಿಕೊಡಲು ಶ್ರಮಿಸಿದರು. ಅವಕಾಶ ವಂಚಿತರು, ಶೋಷಣೆ, ಅನ್ಯಾಯ, ಅವಮಾನ ಹಾಗೂ ದೌರ್ಜನ್ಯಕ್ಕೆ ಒಳಪಟ್ಟ ಎಲ್ಲ ಜನರ ಪರವಾಗಿ ಕೆಲಸ ಮಾಡಿದ್ದರು. ಸಮಾಜದಲ್ಲಿ ಸಮಾನತೆ ಬಯಸಿ ಅದನ್ನೇ ನಿರ್ಮಿಸಲು ಬಹಳ ಸ್ಪಷ್ಟವಾಗಿ ಹೇಳಿದ್ದರು. ಸಂವಿಧಾನದ ಧ್ಯೇಯೋದ್ದೇಶಗಳೂ ಅದನ್ನೇ ಹೇಳುತ್ತದೆ. ಸಂವಿಧಾನದಿಂದ ಅನುಕೂಲ ಪಡೆದವರು ಅವರ ಸೋದರ ಜನಾಂಗಗಳಿಗೆ ಸಹಾಯ ಮಾಡಬೇಕು. ಎಲ್ಲರೂ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಯಸಿದ್ದರು'' ಎಂದರು.
ಪರಸ್ಪರ ದ್ವೇಷ ಸಲ್ಲದು: ''ಬಹಳ ಜನ ಸಂವಿಧಾನ ವಿರೋಧಿಸುತ್ತಾರೆ. ಭಾರತ ಬಹುಸಂಸ್ಕೃತಿಯ, ಬಹುತ್ವದ ದೇಶ. ಅನೇಕ ಜಾತಿ, ಧರ್ಮಗಳಿವೆ. ಅನೇಕ ಭಾಷೆಗಳೂ ಇವೆ. ಇದಕ್ಕೆ ಯೋಗ್ಯವಾದ ಸಂವಿಧಾನವನ್ನು ಕೊಟ್ಟವರು ಅಂಬೇಡ್ಕರ್. ಎಲ್ಲಾ ಧರ್ಮಗಳೂ, ಜಾರಿಗಳೂ ಸಮಾನವಾದುದು. ಮಾನವ ಧರ್ಮಕ್ಕೆ ಒತ್ತು ನೀಡಿದ್ದರು. ಮೂಲಭೂತವಾಗಿ ನಾವೆಲ್ಲಾ ಮನುಷ್ಯರು. ಮಾನವರು ಪರಸ್ಪರ ಪ್ರೀತಿಸಬೇಕೇ ಹೊರತು, ದ್ವೇಷ ಸಲ್ಲದು. ಇದನ್ನು ಅಂಬೇಡ್ಕರ್ ತಮ್ಮ ಬದುಕಿನಲ್ಲಿ ಸಾರಿದ್ದರು''.
''ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ್ದ ನಾನು ಹಿಂದೂ ಆಗಿ ಹುಟ್ಟಿದ್ದು, ಹಿಂದೂ ಆಗಿ ಸಾಯುವುದಿಲ್ಲ ಎಂದು ತಮ್ಮ ಕಡೇ ದಿನಗಳಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದರು. ಸ್ವೀಕಾರ ಮಾಡಿದ ನಂತರ ಬಹಳ ದಿನಗಳ ಕಾಲ ಉಳಿಯಲಿಲ್ಲ. ಅವರು ಕೊಟ್ಟ ಸಂವಿಧಾನದ ಪ್ರಕಾರ ಮತ್ತು ಹೋರಾಟದ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುವುದೇ ಅವರಿಗೆ ನಾವು ಸಲ್ಲಿಸುವ ಗೌರವ. ಅದೇ ರೀತಿಯಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಸಮಾನತೆ ತರುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ'' ಎಂದು ಸಿದ್ದರಾಮಯ್ಯ ತಿಳಿಸಿದರು.
ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ: 'ನನ್ನ ತಪ್ಪಿದ್ದರೆ ರಾಜೀನಾಮೆ ಕೊಡಲೂ ಸಿದ್ಧ': ದಿನೇಶ್ ಗುಂಡೂರಾವ್