ಪಾಲಕ್ಕಾಡ್ (ಕೇರಳ) : ಮಹಿಳೆಯ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ, ಮತ್ತಿಬ್ಬರನ್ನು ಹತ್ಯೆ ಮಾಡಿದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. ಸದ್ಯ ಕೊಲೆಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಜನರು ಠಾಣೆಗೆ ನುಗ್ಗಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ಚೆಂತಮಾರ್ (58) ಕೊಲೆ ಆರೋಪಿ. ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಲಕ್ಷ್ಮಿ (72) ಮತ್ತು ಅವರ ಮಗ ಸುಧಾಕರನ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. 36 ಗಂಟೆಗಳ ಶೋಧ ಕಾರ್ಯಾಚರಣೆಯ ಬಳಿಕ ಕೊಲೆ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಪ್ರಕರಣದ ವಿವರ : ಚೆಂತಮಾರ್, 2019 ರಲ್ಲಿ ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಪಾಲಾಗಿದ್ದ. ಮೃತ ಮಹಿಳೆಯ ಕುಟುಂಬಸ್ಥರು ಈತನ ಮೇಲೆ ಕೊಲೆ ಆರೋಪ ಹೊರಿಸಿದ್ದರು. ಎರಡು ತಿಂಗಳ ಹಿಂದಷ್ಟೇ ಆರೋಪಿ ಜಾಮೀನು ಪಡೆದು ಹೊರಬಂದಿದ್ದ. ತನ್ನ ಮೇಲೆ ಕೊಲೆ ಆರೋಪ ಮಾಡಿ ಜೈಲಿಗೆ ಕಳುಹಿಸಿದ ಕುಟುಂಬದ ಮೇಲೆ ಚೆಂತಮಾರ್ ದ್ವೇಷ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದ್ವೇಷದ ಹಿನ್ನೆಲೆಯಲ್ಲಿ ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿ ಆ ಕುಟುಂಬವಿದ್ದ ಊರಿಗೆ ಭೇಟಿ ನೀಡಿದ್ದ. ಮಹಿಳೆ ಮತ್ತು ಆತನ ಮಗನ ಹತ್ಯೆಗೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಆತ, ಸೋಮವಾರದಂದು (ಜನವರಿ 27) ಅವರ ಮನೆಗೆ ತೆರಳಿ ಆಯುಧದಿಂದ ಇರಿದು ಕೊಂದು ಅಲ್ಲಿಂದ ಪರಾರಿಯಾಗಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅರಣ್ಯದಲ್ಲಿ ಅಡಗಿದ್ದ ಆರೋಪಿ : ಜೋಡಿ ಕೊಲೆ ಮಾಡಿದ ಬಳಿಕ ಆರೊಪಿ ಪೋತುಂಡಿಯಲ್ಲಿರುವ ಅರಣ್ಯದೊಳಗೆ ನುಸುಳಿದ್ದ. ಇದು ಆತನಿಗೆ ಚಿರಪರಿಚಿತ ಜಾಗವಾಗಿತ್ತು. ಹತ್ಯೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅರಣ್ಯದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆತನಿಗಾಗಿ ಕಾದು ಕುಳಿತಿದ್ದರು. ಆರೋಪಿ ಆಹಾರ ಪಡೆದುಕೊಳ್ಳಲು ಅರಣ್ಯದಿಂದ ಹೊರಬಂದಾಗ ಬಂಧಿಸಿದ್ದಾರೆ.
ಮಹಿಳೆ ಕೊಲೆಯಲ್ಲೂ ಇದೇ ತಂತ್ರ : 2019 ರಲ್ಲಿ ಮಹಿಳೆ ಕೊಲೆ ಪ್ರಕರಣದಲ್ಲೂ ಆರೋಪಿ ಇದೇ ತಂತ್ರ ಅನುಸರಿಸಿದ್ದ. ತನ್ನ ದುರದೃಷ್ಟಕ್ಕೆ ನೆರೆಮನೆಯ ಉದ್ದ ಕೂದಲಿನ ಮಹಿಳೆ ಕಾರಣ ಎಂದು ಮಾಂತ್ರಿಕನ ಮಾತು ನಂಬಿ ಆಕೆಯ ಕೊಲೆ ಮಾಡಿದ್ದ. ಬಳಿಕ ಅರಣ್ಯದಲ್ಲಿ ಅಡಗಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಕೊಲೆಗಾರರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ಕಸ್ಟಡಿಗೆ ಕೇಳಲಾಗುವುದು ಎಂದು ಪಾಲಕ್ಕಾಡ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಜಿತ್ ಕುಮಾರ್ ಹೇಳಿದ್ದಾರೆ.