ಬೆಂಗಳೂರು: ಬೆಳಗಾವಿ ವಿಧಾನಮಂಡಲ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ವಿರುದ್ಧ ಅವಾಚ್ಯ ಪದ ಬಳಕೆ ಆರೋಪ ಸಂಬಂಧ ದಾಖಲಾಗಿರುವ ಪ್ರಕರಣ ರದ್ದು ಕೋರಿರುವ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಹ್ಯಾಂಡ್ ಸಮನ್ಸ್ ಜಾರಿ ಮಾಡಿ ಆದೇಶಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸಿ.ಟಿ.ರವಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಪೆಬ್ರುವರಿ 20ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಸಿ.ಟಿ. ರವಿ ಪರ ವಕೀಲರು, ''ಶಾಸನಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ನಡೆದ ಮಾತುಕತೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. ಇದು ಶಾಸಕರ ವಿಶೇಷಾಧಿಕಾರವನ್ನು ಮೊಟಕುಗೊಳಿಸಿದಂತಾಗಿದೆ. ಈ ಸಂಬಂಧ ಸಭಾಪತಿ ನೋಟಿಸ್ ಜಾರಿ ಮಾಡಿ ರೂಲಿಂಗ್ ನೀಡಿದ್ದಾರೆ. ಈ ಅಂಶವನ್ನು ನ್ಯಾಯಾಲಯ ಪರಿಗಣಿಸಬೇಕು'' ಎಂದು ಮನವಿ ಮಾಡಿದರು.
''ಅಲ್ಲದೆ, ಸಭಾಪತಿ ಪೀಠದಲ್ಲಿ ಇಲ್ಲದ ಸಂದರ್ಭದಲ್ಲಿ ನಡೆದಿದೆ. ಸದನದಲ್ಲಿ ಸದಸ್ಯರು ನೀಡಿದ ಹೇಳಿಕೆ ಸಂಬಂಧ ವಿಚಾರಣೆ ನ್ಯಾಯಾಲಯದ ಮುಂದಿದೆ. ಸಭಾಪತಿ ನಿರ್ಧಾರ ಪ್ರಕಟಿಸಿದ ಬಳಿಕ ಸಿಐಡಿ ಪೊಲೀಸರು ತನಿಖೆ ನಡೆಸುವುದಕ್ಕೆ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ'' ಎಂದು ಪೀಠಕ್ಕೆ ವಿವರಿಸಿದರು.
ಈ ವೇಳೆ ಪೀಠ, ''ಸಭೆ ನಡೆಯುತ್ತಿರಲಿ. ಇಲ್ಲದಿರಲಿ ಶಾಸಕರಿಗೆ ವಿನಾಯ್ತಿ ಇದೆ. ಸರಿ ಆದರೆ, ಅದು ಅರ್ಹವಾದ ವಿನಾಯ್ತಿ ಇರಬೇಕಾಗುತ್ತದೆ. ಸಂಪೂರ್ಣ ವಿನಾಯ್ತಿ ಅಲ್ಲ. ಸದನದಲ್ಲಿ ಚರ್ಚೆ ಮಾಡುವ ವಿಚಾರಗಳಲ್ಲಿ ಸದಸ್ಯರಿಗೆ ವಿನಾಯತಿ ಇರಲಿದೆ. ಈ ರೀತಿಯ ಹೇಳಿಕೆಗಳನ್ನು ಸದಸ್ಯರು ಹೇಗೆ ನೀಡುವುದಕ್ಕೆ ಸಾಧ್ಯ'' ಎಂದು ಪ್ರಶ್ನೆ ಮಾಡಿತು.
ವಾದ ಮುಂದುವರೆಸಿದ ವಕೀಲರು, ''ಸದನದಲ್ಲಿ ಸದಸ್ಯರು ಬಾಯಿಗೆ ಬಂದದ್ದು ಮಾತನಾಡಿದರೆ ಸಭಾಪತಿ ಅವರನ್ನು ಸದನದಿಂದ ಹೊರಹಾಕಬಹುದು. ಇಲ್ಲಿ ಅರ್ಹವಾದ ರಕ್ಷಣೆ ಇದೆ. ಆಕ್ಷೇಪಾರ್ಹ, ಅಪರಾಧವಾಗುವ ಮಾತುಗಳನ್ನು ಸದಸ್ಯರು ಆಡಿದರೂ ಇದರ ಸಂಜ್ಞೆಯನ್ನು ಸದನ ಪರಿಗಣಿಸಲಿದೆ'' ಎಂದರು.
''ವಿಧಾನಸೌಧಕ್ಕೆ ಒಮ್ಮೆ ಹೋದ ಮೇಲೆ ಅಲ್ಲಿ ಏನಾದರೂ ಮಾತನಾಡಿದರೆ ಪೊಲೀಸರು ಹೊರಗಡೆ ಕಾಯುತ್ತಿರುತ್ತಾರೆ ಎಂದು ಸದಸ್ಯರಿಗೆ ಅನಿಸಬಾರದು. ಇಲ್ಲಿ ನಮಗೆ ಸಂಪೂರ್ಣ ರಕ್ಷಣೆ ನೀಡಲಾಗಿದೆ. ಮಹಿಳೆಯ ಘನತೆಗೆ ಚ್ಯುತಿ ಉಂಟು ಮಾಡಿದ್ದೇನೆ ಎಂದು ಪೊಲೀಸರು ಪ್ರಕರಣ ದಾಖಲಿಸಲಾಗದು'' ಎಂದು ವಾದ ಮಂಡಿಸಿದರು.
ಸರ್ಕಾರದ ಪರ ವಾದ ಮಂಡಿಸಿದ ಎಸ್‌ಪಿಪಿ ಬಿ.ಎ. ಬೆಳ್ಳಿಯಪ್ಪ, ''ಸದನದಲ್ಲಿ ಚರ್ಚೆ ಮುಂದೂಡಿದ ಬಳಿಕ ನಡೆದ ಪ್ರತಿಭಟನೆ ವೇಳೆ ಸದಸ್ಯ ಸಿ.ಟಿ.ರವಿ ಅವರ ಧ್ವನಿ ಮಾದರಿ ದಾಖಲೆಗೆ ಸಂಬಂಧಿಸಿದ ಅರ್ಜಿಯು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದಿದೆ. ಹೈಕೋರ್ಟ್ ಆದೇಶದಿಂದ ಅದು ತೀರ್ಮಾನವಾಗಿಲ್ಲ'' ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪೀಠ, ''ಇಲ್ಲಿ(ಹೈಕೋರ್ಟ್) ಪ್ರಕರಣದ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ನ್ಯಾಯಾಲಯದಲ್ಲಿ ಪ್ರಕ್ರಿಯೆಗೆ ಅನುಮತಿಸಲು ಸಾಧ್ಯವಾಗುವುದಿಲ್ಲ'' ಎಂದು ತಿಳಿಸಿದರು.
ವಾದ ಮುಂದುವರೆಸಿದ ಎಸ್‌ಪಿಪಿ, ''ಸದನ ನಡೆಯುತ್ತಿರಲಿಲ್ಲ. ಆಗ ಸದನ ಮುಂದೂಡಲ್ಪಟ್ಟಿತ್ತು. ಸಭಾಪತಿಗೆ ದೂರು ನೀಡಲಾಗಿದ್ದು, ಅದನ್ನು ಪರಿಶೀಲಿಸಿದ್ದ ಸಭಾಪತಿಗಳು, ಇದು ನಡೆಯಬಾರದಿತ್ತು ಎಂದು ತಿಳಿಸಿದ್ದಾರೆ. ಅವರು ಸದನ ನಡೆಯುತ್ತಿರಲಿಲ್ಲ ಎಂಬುದಾಗಿ ತಿಳಿಸಿದ್ದಾರೆ'' ಎಂದು ಮಾಹಿತಿ ನೀಡಿದರು.
ಈ ವೇಳೆ ಪೀಠ, ''ಪ್ರಕರಣ ಸಂಬಂಧ ಪ್ರತಿವಾದಿಗಳು ಪ್ರತಿನಿಧಿಸದೆ ವಿಚಾರಣೆ ನಡೆಸುವುದಕ್ಕೆ ಸಾಧ್ಯವಿಲ್ಲ'' ಎಂದು ತಿಳಿಸಿ, ದೂರುದಾರರಾಗಿರುವ ಪ್ರತಿವಾದಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ದ್ವಿಚಕ್ರ ವಾಹನದಲ್ಲಿ ಹಿಂಬದಿ ಕೂರುವ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಕೋರಿ ಅರ್ಜಿ: ವಿವರಣೆ ಕೇಳಿದ ಹೈಕೋರ್ಟ್