ದಾವಣಗೆರೆ: "ನಮಗೆ ಅನ್ಯಾಯವಾದರೆ ನಾವು ಪ್ರತಿಭಟಿಸಬಾರದಾ?. ಯಡಿಯೂರಪ್ಪನವರು ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ನಾವೂ ಹಾಗೇ ಇರಬೇಕಾ?. ರಾಜ್ಯದಲ್ಲಿ 100 ರೂಪಾಯಿ ತೆರಿಗೆ ಸಂಗ್ರಹವಾದರೆ ನಮಗೆ ಕೇಂದ್ರದಿಂದ ಬರುವುದು 12ರಿಂದ 13 ರೂಪಾಯಿ ಮಾತ್ರ" ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿಂದು ಮಾತನಾಡಿದ ಅವರು, ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರದ ಪ್ರತಿಭಟನೆ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಟೀಕಿಸಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, "ಈ ವರ್ಷ ರಾಜ್ಯದಲ್ಲಿ 4 ಲಕ್ಷದ 30 ಸಾವಿರ ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ನಮಗೆ ಕೇಂದ್ರದಿಂದ 50, 257 ಕೋಟಿ ರೂಪಾಯಿ ಅನುದಾನ ಮಾತ್ರ ಬರುತ್ತದೆ. ಉಳಿದಿದ್ದನ್ನು ಅವರೇ ಇಟ್ಟುಕೊಳ್ಳುತ್ತಾರೆ" ಎಂದರು.
"ನಾನು ಸುಳ್ಳು ಹೇಳುತ್ತೇನೆ ಎಂದು ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ತೆರಿಗೆ ಕಟ್ಟುವುದರಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ನಮಗೆ ಸರಿಯಾಗಿ ಅನುದಾನ ಹಂಚಿಕೆ ಮಾಡಿಲ್ಲ ಎಂದಾದರೆ ಸುಮ್ಮನಿರಬೇಕಾ?. ಯಡಿಯೂರಪ್ಪನವರು ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ನಾವೂ ಬಾಯಿ ಮುಚ್ಚಿಕೊಂಡಿರಬೇಕಾ?. ಯಡಿಯೂರಪ್ಪನವರು ತಲೆ ಅಲ್ಲಾಡಿಸುತ್ತಾರೆ ಎಂದರೆ ನಾವು ಅಲ್ಲಾಡಿಸಬೇಕಾ?" ಎಂದು ತಿರುಗೇಟು ನೀಡಿದರು.
ಬರ ನಿರ್ವಹಣೆಗೆ ಅಗತ್ಯ ಕ್ರಮ-ಸಿಎಂ: "ಉದ್ಯೋಗ ಕೊಡುತ್ತಿದ್ದೇವೆ, ಮೇವು ಕೊಡುತ್ತಿದ್ದೇವೆ. 860 ಕೋಟಿ ಹಣವನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕೊಟ್ಟಿದ್ದೇವೆ. ಒಂದೂಂದು ಜಿಲ್ಲೆಗೆ 25, 30 ಕೋಟಿ ಕೊಟ್ಟಿದ್ದೇವೆ. ಯಾವುದೇ ಕಾರಣಕ್ಕೂ ಕುಡಿಯವ ನೀರಿಗೆ, ಮೇವಿಗೆ ತೊಂದರೆಯಾಗಬಾರದು ಮತ್ತು ಜನರು ಗುಳೆ ಹೋಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. 34 ಲಕ್ಷ ರೈತರಿಗೆ 650 ಕೋಟಿಯಲ್ಲಿ, ಪ್ರತಿಯೊಬ್ಬ ರೈತನಿಗೆ 2 ಸಾವಿರ ರೂಪಾಯಿ ತಾತ್ಕಾಲಿಕ ಪರಿಹಾರವನ್ನು ಕೊಟ್ಟಿದ್ದೇವೆ" ಎಂದು ತಿಳಿಸಿದರು.
"ಐದು ತಿಂಗಳು ಕಳೆದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದು ರುಪಾಯಿ ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯದ ಬಿಜೆಪಿ ನಾಯಕರಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ವಿಜಯೇಂದ್ರ ಇವರ್‍ಯಾರೂ ಕೂಡ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಬಳಿ ಒಂದು ರೂಪಾಯಿ ಅನುದಾನವನ್ನೂ ಕೇಳಿಲ್ಲ. ಬರೀ ಭಾಷಣ ಮಾಡುತ್ತಾರೆ, ಟೀಕೆ ಮಾಡುತ್ತಾರೆ ಅಷ್ಟೇ" ಎಂದರು.
ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟಿಸಿ ರಾಜ್ಯದ ಮಾನ, ಮರ್ಯಾದೆ ಕಳೆದರು: ಯಡಿಯೂರಪ್ಪ