ಮೈಸೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಿದೇಶಕ್ಕೆ ಕಳುಹಿಸಿರುವುದೇ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಇಂದು ದೇವೇಗೌಡರು ಪತ್ರ ಬರೆದಿದ್ದಾರೆ. ಈ ಬಗ್ಗೆ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ನನ್ನ ಪ್ರಕಾರ ವಿದೇಶಕ್ಕೆ ಕಳುಹಿಸಿರುವುದೇ ಅವರಲ್ವಾ (ಹೆಚ್.ಡಿ.ದೇವೇಗೌಡರು). ಈಗ ಸುಮ್ಮನೆ ಸಾರ್ವಜನಿಕರ ಅನುಕಂಪಕ್ಕೋಸ್ಕರ ಪತ್ರ ಬರೆದಿದ್ದಾರೆ ಎಂದು ದೂರಿದರು.
ಇದೇ ವೇಳೆ, ಜಿಲ್ಲೆಯ ಕೆ.ಸಾಲುಂಡಿಯಲ್ಲಿ ಕಲುಷಿತ ನೀರು ಸೇವನೆಯಿಂದ ಯುವಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸ್ಥಳೀಯ ಪಟ್ಟಣ ಪಂಚಾಯಿತಿಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಈ ಪ್ರಕರಣದ ಬಗ್ಗೆ ನಮಗೆ ಜಿಲ್ಲಾಧಿಕಾರಿ ವರದಿ ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ಈ ಕ್ರಮ ಕೈಗೊಂಡಿದ್ದೇವೆ. ಇನ್ಮುಂದೆ ನಿಯಮಿತವಾಗಿ ಕುಡಿಯುವ ನೀರಿನ ಟ್ಯಾಂಕರ್ ಸ್ವಚ್ಛ ಮಾಡಬೇಕೆಂದು ಆದೇಶ ಮಾಡಲಾಗಿದೆ. ಈ ಪ್ರಕರಣದಲ್ಲಿ ಕಲುಷಿತ ನೀರು ಸರಬರಾಜು ಆಗಿದೆ. ಅದನ್ನ ಯಾರೂ ಪರೀಕ್ಷೆ ಮಾಡಿಲ್ಲ. ಹಾಗಾಗಿ ಈ ಘಟನೆ ನಡೆದಿದೆ ಎಂದರು.
ಪರಿಹಾರ ವಿತರಣೆ: ಇದೇ ವೇಳೆ, ಯರಗನಹಳ್ಳಿ ಅನಿಲ ಸೋರಿಕೆ ಪ್ರಕರಣದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಕುಟುಂಬಸ್ಥರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಸಾಂತ್ವನ ಹೇಳಿದರು. ಮೃತರ ಕುಟುಂಬಸ್ಥರಿಗೆ 12 ಲಕ್ಷ ರೂ. ಪರಿಹಾರ ವಿತರಿಸಿದರು.
ಅಲ್ಲದೇ, ಜಯಪುರದ ಕೆ.ಸಾಲುಂಡಿ ಗ್ರಾಮಕ್ಕೆ ಭೇಟಿ ನೀಡಿ, ಕಲುಷಿತ ನೀರು ಕುಡಿದು ಮೃತಪಟ್ಟ ಕಾಂತರಾಜು ಕುಟುಂಬಸ್ಥರಿಗೂ ಸಾಂತ್ವನ ಹೇಳಿದರು. ಸರ್ಕಾರದಿಂದ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಮೃತ ಕಾಂತರಾಜು ಅವರ ಪುತ್ರ ರವಿಗೆ ಕೆಲಸ ಕೊಡಿಸುವ ಭರವಸೆಯನ್ನೂ ಸಿಎಂ ನೀಡಿದರು. ಈ ವೇಳೆ, ಮಾಜಿ ಶಾಸಕ ಯತೀಂದ್ರ ವೈಯುಕ್ತಿಕವಾಗಿ ನಗದು ಪರಿಹಾರ ನೀಡಿದರು.
ಇದನ್ನೂ ಓದಿ: ಪೊಲೀಸರಿಗೆ ಶರಣಾಗದಿದ್ದಲ್ಲಿ ಏಕಾಂಗಿಯಾಗುವೆ: ಕುಟುಂಬದಿಂದಲೇ ಹೊರಹಾಕುವುದಾಗಿ ಪ್ರಜ್ವಲ್ಗೆ ಎಚ್ಚರಿಕೆ ನೀಡಿದ ದೇವೇಗೌಡ