ಮೈಸೂರು: ಕೋಲಾರದಲ್ಲಿ ಲೋಕಸಭಾ ಟಿಕೆಟ್ ಕುರಿತು ಸಚಿವರು ಹಾಗೂ ಶಾಸಕರ ಅಸಮಾಧಾನ ಇರುವುದು ಸತ್ಯ. ದಲಿತ ಎಡಗೈ ಬದಲು ಬಲಗೈ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಎಂಬುದು ಅವರ ಒತ್ತಾಯ. ಈ ಬಗ್ಗೆ ನಾನು ಅವರ ಜೊತೆ ಮಾತನಾಡಿದ್ದೇನೆ. ಸಮಾಧಾನದಿಂದ ಇರಿ ಎಂದು ಹೇಳಿದ್ದೇನೆ. ಇನ್ನೂ ಟಿಕೆಟ್ ಘೋಷಣೆ ಆಗಿಲ್ಲ. ಆದರೂ ಎಡಗೈ ಸಮುದಾಯಕ್ಕೆ ಟಿಕೆಟ್ ಸಿಗುತ್ತದೆ ಎಂದು ಅವರು ಭಯ ಪಟ್ಟಿದ್ದಾರೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಕೋಲಾರದಲ್ಲಿ ಟಿಕೆಟ್ ಕುರಿತು ಸಚಿವರು, ಶಾಸಕರ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು. "ಮಂಡ್ಯಕ್ಕೆ ಹೆಚ್. ಡಿ .ಕುಮಾರಸ್ವಾಮಿ ಅವರು ಹೊಸ ಮುಖ. ಅವರು ಮುಖ್ಯಮಂತ್ರಿಯಾಗಿದ್ದಂತಹ ಸಂದರ್ಭದಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ಅವರ ಮಗ ನಿಖಿಲ್ ಕುಮಾರಸ್ವಾಮಿ ಸೋತಿದ್ದು. ಮುಖ್ಯಮಂತ್ರಿ ಆಗಿದ್ದಾಗಲೇ ಮಗನನ್ನು ಗೆಲ್ಲಿಸಿಕೊಳ್ಳಲು ಆಗಿಲ್ಲ. ಈಗ ಗೆಲ್ಲೋಕೆ ಆಗುತ್ತಾ? ಮಂಡ್ಯದಲ್ಲಿ ಹೆಚ್. ಡಿ. ಕುಮಾರಸ್ವಾಮಿ ಸೋಲೋದಂತೂ ಗ್ಯಾರಂಟಿ." ಎಂದು ಹೇಳಿದರು.
"ನಮ್ಮ ಅಭ್ಯರ್ಥಿ ಮಂಡ್ಯದವರು. ಆದರೆ, ಕುಮಾರಸ್ವಾಮಿ ಅವರು ಹಾಸನದವರು. ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಸುಮಲತಾ ಅವರ ಜೊತೆಗೆ ಮಾತನಾಡಿಲ್ಲ. ನಮ್ಮ ಅಭ್ಯರ್ಥಿ ಸ್ಟ್ರಾಂಗ್ ಇದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ನಾವು ಸೋಲಿಸುತ್ತೇವೆ." ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಅಧಿಕೃತ ಘೋಷಣೆಗೂ ಮುನ್ನವೇ ಸುನೀಲ್ ಬೋಸ್ ಅಭ್ಯರ್ಥಿ ಎನ್ನುವುದು ರಿವೀಲ್ ಆಗಿರುವ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, "ಅದು ಬರೀ ನಿರೀಕ್ಷೆ ಅಷ್ಟೇ. ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ." ಎಂದು ಸ್ಪಷ್ಟನೆ ನೀಡಿದರು.
"ಹೆಚ್.ಸಿ ಮಹಾದೇವಪ್ಪ ಅಥವಾ ಅವರ ಮಗ ಸುನೀಲ್ ಬೋಸ್ಗೆ ಲೋಕಸಭಾ ಚುನಾವಣೆ ಟಿಕೆಟ್ ಕೊಡಿ ಎನ್ನುವ ಒತ್ತಾಯ ಇದೆ. ಯಾವುದೂ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಮೈಸೂರಿನಲ್ಲಿ ಕಾಂಗ್ರೆಸ್ ಪರ ವಾತಾವರಣ ಚೆನ್ನಾಗಿದೆ. ನಾವು ಗೆದ್ದೇ ಗೆಲ್ಲುತ್ತೇವೆ." ಎಂದರು.
ಇದನ್ನೂ ಓದಿ: ರಾಜೀನಾಮೆ ಪತ್ರ ಹಿಡಿದು ಸಭಾಪತಿ ಮುಂದೆ ಕುಳಿತಿದ್ದ ಇಬ್ಬರು ಎಂಎಲ್ಸಿಗಳ ಮನವೊಲಿಸಿದ ಬೈರತಿ ಸುರೇಶ್ - KOLAR TICKET ISSUE