ಬೆಂಗಳೂರು : ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲು ನೀಡುವ ಬಗ್ಗೆ ಸಂಪುಟ ಸಭೆಯಲ್ಲಿ ಅರ್ಧಂಬರ್ಧ ಚರ್ಚೆ ಆಗಿತ್ತು. ಮುಂದಿನ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಈ ವಿಚಾರವಾಗಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಅವರು, ಇದು ಯಾವ ತುಘಲಕ್ ಆಡಳಿತನೂ ಅಲ್ಲ. ಇಲ್ಲಿ ಸಿದ್ದರಾಮಯ್ಯ ಸರ್ಕಾರದ ಆಡಳಿತ ಇರುವುದು. ಸೋಮವಾರ ಸಚಿವ ಸಂಪುಟದಲ್ಲಿ ಆ ವಿಚಾರ ಅರ್ಧಂಬರ್ಧ ಚರ್ಚೆ ಆಗಿದೆ. ಪೂರ್ಣ ತೀರ್ಮಾನ ಆಗಿಲ್ಲ. ಅಷ್ಟರಲ್ಲಿ ಪತ್ರಿಕೆಯಲ್ಲಿ ಬರೆಯಲಾಗಿದೆ. ಈ ವಿಚಾರವಾಗಿ ಸ್ವಲ್ಪ ಗೊಂದಲ ಇದೆ. ಗೊಂದಲ ನಿವಾರಣೆಗಾಗಿ ಮತ್ತೆ ಸಂಪುಟದಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಇದಕ್ಕೂ ಮುಂಚೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ 100ರಷ್ಟು ಮೀಸಲಾತಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಘೋಷಣೆ ಮಾಡಿದರು. ಅರ್ಧ ಗಂಟೆಯಲ್ಲಿ ಸಿಎಂ ಅದನ್ನು ಡಿಲೀಟ್ ಮಾಡಿದರು. ಬಳಿಕ ಶೇ 75ರಷ್ಟು ಹಾಗೂ 50ರಷ್ಟು ಮೀಸಲಾತಿ ಎಂದು ಪೋಸ್ಟ್ ಮಾಡಿದರು. ಬಳಿಕ ವಿಧೇಯಕವನ್ನು ಹಿಂಪಡೆಯಲಾಗಿದೆ ಎಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡುತ್ತಾರೆ ಎಂದು ಉಲ್ಲೇಖಿಸಿದರು.
ಕನ್ನಡ ಮೀಸಲಾತಿ ಬಗ್ಗೆ ಸಿಎಂ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಪದೇ ಪದೆ ಬದಲಾವಣೆ ಮಾಡಿದ್ದಾರೆ. ನೀವು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದವರು. ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿಲ್ಲ. ರಾಜ್ಯಕ್ಕೆ ಈ ನಿಟ್ಟಿನಲ್ಲಿ ಒಂದು ಸಂದೇಶ ಹೋಗಬೇಕು. ಈ ಬೆಳವಣಿಗೆ ಒಳ್ಳೆಯದಲ್ಲ. ಇದು ತುಘಲಕ್ ದರ್ಬಾರ್ ಆಗಿದೆ ಎಂದು ಟೀಕಿಸಿದರು.
ನಾನು ಯಾವುದೇ ಅಡ್ಜೆಸ್ಟ್ಮೆಂಟ್ ಮಾಡಿಕೊಂಡಿಲ್ಲ: ವಿಧಾನಸಭೆಯಲ್ಲಿ ಮಾತನಾಡುವಾಗ ಯತ್ನಾಳ್ ನಿಮ್ಮನ್ನು ಹೊಗಳಿದ್ದಾರೆ ಎಂದು ಸಿಎಂಗೆ ಆರ್. ಅಶೋಕ್ ಉಲ್ಲೇಖಿಸುತ್ತಿದ್ದ ಹಾಗೆ ಎದ್ದು ನಿಂತ ಬಸನಗೌಡ, ಇದಕ್ಕೆ ಬಣ್ಣ ಹಚ್ಚಲು ಹೋಗಬೇಡಿ. ನಾನು ಸಿಎಂ ಬಳಿ ಒಂದು ಕೆಲಸಕ್ಕೆ ಹೋಗಿಲ್ಲ. ಅವರ ಕಚೇರಿಗೆ ಹೋಗಿಲ್ಲ, ಮನೆಗೂ ಹೋಗಿಲ್ಲ. ನೀವು ಫುಲ್ಟಾಸ್ ಹೊಡೆದರೆ ಯತ್ನಾಳ್ಗೆ ಏನೂ ಆಗುವುದಿಲ್ಲ ಎಂದು ಆರ್. ಅಶೋಕ್ ಕಾಲೆಳೆದರು.
ಯತ್ನಾಳ್ ಸಿದ್ದರಾಮಯ್ಯ ಮನೆಗೆ ಹೋಗಿಲ್ಲ. ನನ್ನ ಪರವಾಗಿ ಯಾವುದೇ ಕೆಲಸ ಮಾಡಿಕೊಂಡಿಲ್ಲ. ನಾನು ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡಿಲ್ಲ ಎಂದರು.
ಇದನ್ನೂ ಓದಿ : ಕನ್ನಡಿಗರಿಗೆ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮೀಸಲಾತಿ ವಿಧೇಯಕಕ್ಕೆ ತಾತ್ಕಾಲಿಕ ತಡೆ: ಸಿಎಂ ಟ್ವೀಟ್ - Temporary suspension of the bill