ಶಿವಮೊಗ್ಗ: ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಬಿಳಚಿ ಕ್ಯಾಂಪ್ ಗ್ರಾಮದಲ್ಲಿ ಶನಿವಾರ ಸಂಜೆ ಗಣೇಶ ಹಬ್ಬದ ವೇಳೆ ಡೊಳ್ಳು ಬಾರಿಸುವ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಕಲ್ಲು ತೂರಾಟ ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಸೇರಿ ಕೆಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ಗಣಪತಿ ಸಂಘಗಳು ಒಂದೇ ಡೊಳ್ಳಿನ ತಂಡದವರಿಗೆ ಹೇಳಿದ್ದರು. ಆದರೆ ಎರಡೂ ಸಂಘಗಳ ಮೆರವಣಿಗೆ ಒಂದೇ ವೇಳೆ ಇದ್ದಿದ್ದರಿಂದ ಡೊಳ್ಳಿನ ತಂಡಕ್ಕೆ ಇನ್ನೊಂದು ಗಣಪತಿ ಸಂಘದ ಮೆರವಣಿಗೆಗೆ ಹೋಗಲು ತಡವಾಗಿದೆ. ಇದರಿಂದ ಗಣಪತಿ ಸಂಘದವರು ಆಗಮಿಸಿದಾಗ ಗಲಾಟೆಯಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ತುಕಡಿ ನಿಯೋಜಿಸಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ, ಭದ್ರಾವತಿ ಡಿವೈಎಸ್ಪಿ ಹಾಗೂ ಹೊಳೆಹೊನ್ನೂರು ಪೊಲೀಸ್ ಇನ್ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಕುರಿತು 'ಈಟಿವಿ ಭಾರತ' ಜೊತೆ ಮಾತನಾಡಿದ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರು, ಗ್ರಾಮದ ಎರಡು ಸಂಘಟನೆಯವರು ಒಂದೇ ಡೊಳ್ಳಿನ ತಂಡಕ್ಕೆ ಬಾರಿಸಲು ಹೇಳಿದ್ದಾರೆ. ಡೊಳ್ಳಿನವರು ಮೊದಲನೇ ಗಣಪತಿ ಬಳಿ ಬಾರಿಸುವಾಗ, ಇನ್ನೊಂದು ಗಣಪತಿ ಸಂಘದವರು ಬಂದು ವಿಚಾರಿಸಿದ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ವೇಳೆ ಗ್ರಾಮಸ್ಥರು ಸೇರಿದಂತೆ ನಮ್ಮ ಓರ್ವ ಪೊಲೀಸ್ ಸಿಬ್ಬಂದಿಗೂ ಸಣ್ಣ ಗಾಯವಾಗಿದೆ. ಸದ್ಯ ಗ್ರಾಮ ಶಾಂತಿಯುತವಾಗಿದೆ. ಇಂದೇ ಎಲ್ಲಾ ಗಣಪತಿ ನಿಮಜ್ಜನಕ್ಕೆ ಮನವಿ ಮಾಡಿದ್ದೆವು. ನಮ್ಮ ಪೊಲೀಸ್ ಸಿಬ್ಬಂದಿಯು ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ತಿಳಿದ್ದಾರೆ.