ಬೆಂಗಳೂರು : ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಸಂಬಂಧ ಈ ಬಾರಿ ಕೇವಲ ಎರಡು ಗಂಟೆಗಳ ಕಾಲ ಮಾತ್ರ ಅವಕಾಶ ಮಾಡಿಕೊಡಲಾಗಿದ್ದು, ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಸಾರ್ವಜನಿಕರು ಪಟಾಕಿ ಸಿಡಿಸಲು ಅನುಮತಿ ನೀಡಲಾಗಿದೆ.
ಈ ಬಗ್ಗೆ ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಹಾಗೂ ನಗರ ಪೊಲೀಸ್ ಇಲಾಖೆ ಆದೇಶ ಹೊರಡಿಸಿದ್ದು, ಸಾರ್ವಜನಿಕರು ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡಬೇಕು, ಇಲ್ಲವಾದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿವೆ.
ಸಾರ್ವಜನಿಕರು ಕೇವಲ ಹಸಿರು ಪಟಾಕಿಗಳನ್ನು ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ಹಾಗೂ ಹಸಿರು ಪಟಾಕಿ ಬಿಟ್ಟು ಬೇರೆ ನಿಷೇದಿತ ಪಟಾಕಿಗಳ ಮಾರಾಟ, ದಾಸ್ತಾನು ಮಾಡುವವರ ವಿರುದ್ಧ ಇಡೀ ಗೋದಾಮು ಮುಟ್ಟುಗೋಲು ಹಾಕಿಕೊಂಡು ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಲ್ಲಾ ವಲಯ ಆಯುಕ್ತರಿಗೆ ಸೂಚಿಸಿದ್ದಾರೆ.
ಸರ್ವೋಚ್ಛ ನ್ಯಾಯಾಲಯವು ಪಟಾಕಿಗಳಿಗೆ ಸಂಬಂಧಿಸಿದಂತೆ ಹಲವಾರು ನಿರ್ದೇಶನಗಳನ್ನು ನೀಡಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಾಗೂ ಸರ್ವೋಚ್ಛ ನ್ಯಾಯಾಲಯದ ಸೂಚನೆಯಂತೆ ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಅಕ್ಟೋಬರ್ 31ರಿಂದ ನವೆಂಬರ್ 2 ರವೆಗೆ ಸ್ಫೋಟಿಸಲು ಅವಕಾಶ ನೀಡಿದೆ. ಉಳಿದ ಸಮಯದಲ್ಲಿ ಪಟಾಕಿಗಳ ಸ್ಪೋಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದು ತಿಳಿಸಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ಕಟ್ಟಪ್ಪಣೆ :
- ಎಲ್ಲಾ ಹಸಿರು ಪಟಾಕಿಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಹಾಗೂ ಕ್ಯೂ.ಆರ್ ಕೋಡ್ ಇರುವ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು.
- ನಿಶಬ್ಧ ವಲಯಗಳೆಂದು ಘೋಷಿಸಲ್ಪಟ್ಟಿರುವ ಸ್ಥಳಗಳಲ್ಲಿ (ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ, ವೃದ್ಧಾಶ್ರಮ ಇತ್ಯಾದಿಗಳು) ಪಟಾಕಿ ಬಳಕೆಯನ್ನು ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿರುವುದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಇದನ್ನೂ ಓದಿ : ಹಸಿರು ಪಟಾಕಿ ಎಂದರೇನು?: ಗುಣಮಟ್ಟದ ಹಸಿರು ಪಟಾಕಿ ಗುರುತಿಸುವುದು ಹೇಗೆ?