ಬೆಂಗಳೂರು : ಚಿತ್ರಕಲಾ ಪರಿಷತ್ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಕೇಂದ್ರೀಕೃತವಾಗಿದ್ದು, ಅದರ ಸೇವೆ ರಾಜ್ಯದ ಜನರಿಗೆ ತಲುಪಬೇಕಾಗಿದೆ. ರಾಜ್ಯದ ಇತರ ಭಾಗಗಳಿಗೂ ವಿಸ್ತರಣೆ ಮಾಡಬೇಕಾದ ಅಗತ್ಯವಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಹೆಚ್. ಕೆ ಪಾಟೀಲ್ ಸಲಹೆ ನೀಡಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್ನಿಂದ ಶನಿವಾರ ಹಮ್ಮಿಕೊಂಡಿದ್ದ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಚಿತ್ರಕಲಾ ಪರಿಷತ್ನ ಸೇವೆ ಇತರೆಡೆಗೂ ತಲುಪುವಂತಾಗಿದ್ದು, ಪರಿಷತ್ತಿನ ಶಾಖೆಗಳು ರಾಜ್ಯಾದ್ಯಂತ ತೆಗೆಯಬೇಕು. ಗದಗ ಜಿಲ್ಲೆಯಲ್ಲಿ ಇದರ ಶಾಖೆ ತೆರೆಯಲು ಕೇಳಿದಷ್ಟು ಜಾಗದ ವ್ಯವಸ್ಥೆ ಮಾಡಲಾಗುವುದು. ನಾಡ ದೇವಿಯ ಮೊದಲ ಚಿತ್ರವನ್ನು ಕೊಟ್ಟಿದ್ದು ಗದಗ. ಇಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ. ಬೇಂದ್ರೆ ಕೂಡ ಇಲ್ಲಿ ಸಾಹಿತ್ಯ ಕೃಷಿ ಮಾಡಿದ್ದರು. ಮನುಷ್ಯ ಯಾವುದರಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೊ ಆ ಕ್ಷೇತ್ರದಲ್ಲಿ ಅವರು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕರ್ನಾಟಕ ಚಿತ್ರಕಲಾ ಪರಿಷತ್ ರಾಷ್ಟ್ರದ ಶ್ರೇಷ್ಠ ಕಲಾ ಸಂಸ್ಥೆಯಾಗಿದೆ. ಪರಿಷತ್ತು ನಡೆಸುವ ವಾರ್ಷಿಕ ಚಿತ್ರಕಲಾ ಪ್ರದರ್ಶನ ಚಿತ್ರಸಂತೆ ಎಂದು ಕರೆದರೆ ಅದು ಚಿಕ್ಕದಾಗಲಿದ್ದು, ಅದೀಗ ಚಿತ್ರ ಜಾತ್ರೆಯಾಗಿ ಬೆಳೆದಿದೆ ಎಂದು ಹೇಳಿದರು.
ಈ ಹಿಂದೆ ಚಿತ್ರಕಲಾ ಪರಿಷತ್ ಪ್ರವಾಸಿ ತಾಣವಾಗಿ ಮಾರ್ಪಟ್ಟಿತ್ತು. ಬೆಂಗಳೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದ ಪ್ರವಾಸಿಗರ ವಾಹನವನ್ನು ಮತ್ತೆ ಪುನರಾರಂಭಿಸಲಾಗುವುದು ಎಂದು ಅವರು ತಿಳಿಸಿದರು. ಅಲ್ಲದೆ, ಇದೀಗ ಪ್ರಾರಂಭಿಸಿರುವ ಸಂಜೆ ಚಿತ್ರಕಲಾ ಕಾಲೇಜು ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಚಿತ್ರಕಲಾ ಪರಿಷತ್: ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್ ಮಹಾ ನಿರ್ದೇಶಕ ಡಾ. ಸಂಜೀವ್ ಕಿಶೋರ್ ಗೌತಮ್ ಮಾತನಾಡಿ, ಚಿತ್ರಕಲಾ ಪರಿಷತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ರಷ್ಯಾ ಮೂಲದ ನಿಕೋಲಸ್ ರೋರಿಚ್ ಅವರಂತಹ ದಿಗ್ಗಜ ಕಲಾವಿದರ ಕಲಾಕೃತಿಗಳನ್ನು ಒಳಗೊಂಡು ಶ್ರೀಮಂತವಾಗಿದೆ. ಯುವ ಕಲಾವಿದರನ್ನು ಬೆಳೆಸುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಎಂದು ತಿಳಿಸಿದರು.
ಪರಿಷತ್ ಕಟ್ಟಿಬೆಳಸಿದವರ ಹೆಸರಿನಲ್ಲಿ ಪ್ರಶಸ್ತಿ: ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ. ಬಿ. ಎಲ್ ಶಂಕರ್ ಮಾತನಾಡಿ, ಕಳೆದ ಎಂಟು ವರ್ಷಗಳಿಂದ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇತಿಹಾಸ ಸೇರಿದ ಚಿತ್ರಕಲಾ ಪರಿಷತ್ತನ್ನ ಕಟ್ಟಿ ಬೆಳೆಸಿದ ಮಹನೀಯರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.
ಚಿತ್ರ ಸಂತೆಯಲ್ಲಿ ಪ್ರದರ್ಶನಕ್ಕೆ ಅವಕಾಶ ಕೋರಿ 3,470 ಅರ್ಜಿ ಬಂದಿದ್ದು, ಅವುಗಳಲ್ಲಿ 1400-1500ಕ್ಕೆ ಮಾತ್ರ ಅವಕಾಶ ಕಲ್ಪಿಸುತ್ತಿದ್ದು, ಉಳಿದವರ ಕಲಾಕೃತಿಗಳನ್ನು ಆನ್ಲೈನ್ನಲ್ಲಿ ಒಂದು ತಿಂಗಳು ಪ್ರದರ್ಶಿಸಲು ಉಚಿತ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿದ ಡಾ. ಎಂ. ಎಸ್ ಮೂರ್ತಿ, ಸಾಂಸ್ಕೃತಿಕ ವಲಯದಲ್ಲಿ ದೃಶ್ಯಕಲೆ ಕೊನೆಯ ಹಂತದಲ್ಲಿ ಇದೆ. ಅಕ್ಷರದ ತಾಯಿಯಾದ ದೃಶ್ಯ ಕಲೆ ಸಮಾಜವನ್ನು ಹೇಗೆ ನೋಡಬೇಕು ಎಂಬುದನ್ನು ಕಲಿಸಿದೆ. ಕಲಾವಿದರು ಪ್ರಶಸ್ತಿಗೆ ಹಂಬಲಿಸುವುದಿಲ್ಲ. ಪ್ರಶಸ್ತಿಯನ್ನು ಸ್ವೀಕರಿಸುವುದು ಕೂಡ ಎಚ್ಚರಿಕೆಯಿಂದ ಇರಬೇಕಾದ ಸ್ಥಿತಿ ಇದು. ಯಾರು ಕೊಡುತ್ತಿದ್ದಾರೆ? ಯಾಕಾಗಿ ಮತ್ತು ಹೇಗೆ ಕೊಡುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡು ನೈತಿಕವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಇದೇ ವೇಳೆ ದೇವರಾಜ ಅರಸು ಪ್ರಶಸ್ತಿಗೆ ಡಾ. ಎಂ. ಎಸ್ ಮೂರ್ತಿ, ಕೆ. ಎಸ್ ನಾಗರತ್ನಮ್ಮ ಪ್ರಶಸ್ತಿಗೆ ಎ. ರಾಮಕೃಷ್ಣಪ್ಪ, ವೈ. ಸುಬ್ರಹ್ಮಣ್ಯರಾಜು ಪ್ರಶಸ್ತಿಗೆ ಜಿ. ಎಲ್ ಭಟ್, ಹೆಚ್. ಕೆ ಕೇಜ್ರಿವಾಲ್ ಪ್ರಶಸ್ತಿಗೆ ಸೂರ್ಯಪ್ರಕಾಶ್ ಗೌಡ ಹಾಗೂ ಎಂ. ಆರ್ಯಮೂರ್ತಿ ಪ್ರಶಸ್ತಿಗೆ ನಿರ್ಮಲಾಕುಮಾರಿ ಸಿ. ಎಸ್ ಭಾಜನರಾದರು. ಪ್ರಶಸ್ತಿ 50 ಸಾವಿರ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ : ಚಿತ್ರಸಂತೆ 2024: ಜನರನ್ನು ಆಯಸ್ಕಾಂತದಂತೆ ಆಕರ್ಷಿಸಿದ ಫೈರೋಗ್ರಾಫಿ ಕಲೆ - ಯುರೋಪಿನ ಫೈರೋಗ್ರಾಫಿ ಕಲೆ