ಕಾರವಾರ (ಉತ್ತರ ಕನ್ನಡ): ದೇಶದ ರಕ್ಷಣೆಗಾಗಿ ಸತತ 29 ವರ್ಷಗಳ ಕಾಲ ಕಡಲಿನಲ್ಲಿ ನೌಕಾ ಸೈನ್ಯದೊಂದಿಗೆ ಶತ್ರುಗಳ ಸಂಹಾರಕ್ಕೆ ಹೋರಾಟ ನಡೆಸಿದ ಐಎನ್ಎಸ್ ಚಾಪೆಲ್ ಯುದ್ಧ ನೌಕೆಯನ್ನು 45 ಲಕ್ಷ ರೂ. ವೆಚ್ಚದಲ್ಲಿ ರಿಪೇರಿ ಮಾಡಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಮುಂದಾಗಿದೆ.
ಐಎನ್ಎಸ್ ಚಾಪೆಲ್ ಭಾರತೀಯ ನೌಕಾಪಡೆಯ ಹೆಮ್ಮೆಯ ಯುದ್ಧನೌಕೆ. ರಷ್ಯಾ ನಿರ್ಮಿತ ಈ ಯುದ್ಧನೌಕೆ 1976ರಲ್ಲಿ ವಿಶಾಖಪಟ್ಟಣಂ ನೌಕಾನೆಲೆಗೆ ಆಗಮಿಸಿತ್ತು. ಸುಮಾರು 375 ಟನ್ ತೂಕದ ಯುದ್ಧನೌಕೆ ಸಾಕಷ್ಟು ವಿಶೇಷತೆಯನ್ನ ಹೊಂದಿತ್ತು. ಗಂಟೆಗೆ 70 ಕಿಲೋ ಮೀಟರ್ ವೇಗವಾಗಿ ಸಾಗುವ ಚಾಪೆಲ್ ಯುದ್ಧನೌಕೆಯಲ್ಲಿ ನಾಲ್ಕು ಕ್ಷಿಪಣಿ ನಾಶಕ ಹಾಗೂ 2 ವಿಮಾನ ನಾಶಕಗಳು ಸದಾ ಸನ್ನದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದವು. ಇನ್ನು 4 ಕಿಲೋ ಮೀಟರ್ ದೂರದ ವಿಮಾನಗಳನ್ನ ಹೊಡೆದುರುಳಿಸುವ ಶಕ್ತಿ ಇದ್ದ ಚಾಪೆಲ್ ಯುದ್ಧನೌಕೆ ಸತತವಾಗಿ 29 ವರ್ಷಗಳ ಕಾಲ ಕಡಲಿನಲ್ಲಿ ದೇಶ ರಕ್ಷಣೆಗಾಗಿ ಸೇವೆ ಸಲ್ಲಿಸಿತ್ತು.
2005 ರಲ್ಲಿ ತನ್ನ ಸೇವೆಯಿಂದ ನಿವೃತ್ತಿಯಾಗಿದ್ದ ಚಾಪೆಲ್ ನೌಕೆಯನ್ನು ಕಾರವಾರಕ್ಕೆ ಕೊಡಲು ತೀರ್ಮಾನಿಸಲಾಗಿತ್ತು. 2006ರ ನವೆಂಬರ್ 7 ರಂದು ನೌಕೆ ಕಾರವಾರದ ಟ್ಯಾಗೂರ್ ಕಡಲತೀರಕ್ಕೆ ಕಾಲಿಟ್ಟು ಸಾರ್ವಜನಿಕ ವೀಕ್ಷಣೆಗೆ ಮ್ಯೂಸಿಯಂ ಮೂಲಕ ತನ್ನ ಕಾರ್ಯವನ್ನು ಪ್ರಾರಂಭಿಸಿತ್ತು. ಕಾರವಾರಕ್ಕೆ ನೌಕೆ ತಂದು 18 ವರ್ಷಗಳಾಗಿದ್ದು, ನಿರ್ವಹಣೆ ಇಲ್ಲದೇ ತುಕ್ಕು ಹಿಡಿದು ನೌಕೆಗೆ ಪ್ರವಾಸಿಗರ ಭೇಟಿಯನ್ನೇ ಬಂದ್ ಮಾಡುವ ಸ್ಥಿತಿಯಲ್ಲಿತ್ತು. ಇದೀಗ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ನೌಕೆಯನ್ನು ಮತ್ತೆ ರಿಪೇರಿ ಮಾಡುವ ಮೂಲಕ ಪ್ರವಾಸಿಗರನ್ನ ಹೆಚ್ಚು ಸೆಳೆಯುವ ಕಾರ್ಯಕ್ಕೆ ಮುಂದಾಗಿದೆ.
ಭಾರತೀಯ ನೌಕಾಪಡೆಯ ಯುದ್ಧ ನೌಕೆಗಳು ಮುಂಬೈ, ಗೋವಾ ಹಾಗೂ ರಾಜ್ಯದಲ್ಲಿ ಕೇವಲ ಕಾರವಾರದ ಠಾಗೂರ್ ಕಡಲ ತೀರದಲ್ಲಿ ಮಾತ್ರ ಮ್ಯೂಸಿಯಂ ಆಗಿವೆ. ರಾಜ್ಯದ ಜನತೆಗೆ ನೌಕಾಪಡೆಯ ಬಗ್ಗೆ ಮಾಹಿತಿ ಒದಗಿಸುವ ಇರುವ ಏಕೈಕ ಮ್ಯೂಸಿಯಂ ಇದಾಗಿದೆ. ಯುದ್ಧ ನೌಕೆಯನ್ನು ಈ ಮೊದಲು ಜಿಲ್ಲಾಡಳಿತ ನಿರ್ವಹಣೆ ಮಾಡುತ್ತಿತ್ತು. ಇದಾದ ನಂತರ ನಗರಸಭೆಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗಿತ್ತು. ನಂತರ ಮತ್ತೆ ಜಿಲ್ಲಾಡಳಿತದ ಅಡಿಯಲ್ಲಿಯೇ ನಿರ್ವಹಣೆ ಪ್ರಾರಂಭಿಸಲಾಗಿತ್ತು.
ನೌಕೆಗೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದು, ಕಳೆದ 18 ವರ್ಷದಿಂದ ಲಕ್ಷಕ್ಕೂ ಅಧಿಕ ಜನ ನೌಕೆ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ನೌಕೆಯಲ್ಲಿನ ಕಾರ್ಯಚಟುವಟಿಕೆ ನೌಕೆಯ ಸಿಬ್ಬಂದಿಗಳು ಯಾವ ರೀತಿ ಜೀವನ ಶೈಲಿ ನಡೆಸುತ್ತಿದ್ದರು. ಯಾವ ರೀತಿ ಕಡಲಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಜೊತೆಗೆ ಭಾರತೀಯ ನೌಕಾಪಡೆಯ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿಯನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇನ್ನು ಪ್ರವಾಸಿಗರಿಂದ ಸಣ್ಣ ಪ್ರಮಾಣದ ಹಣವನ್ನು ಸಹ ಸಂಗ್ರಹಿಸುತ್ತಿದ್ದು, ಕಳೆದ 10 ವರ್ಷದಲ್ಲಿ ಲಕ್ಷಗಟ್ಟಲೇ ಆದಾಯವನ್ನು ಜಿಲ್ಲಾಡಳಿತಕ್ಕೆ ನೌಕೆ ತಂದುಕೊಟ್ಟಿದೆ. ನೌಕೆಯ ರಿಪೇರಿ ಕಾರ್ಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಪದೆ ಪದೇ ಹಾಳಾಗದಂತೆ ರಿಪೇರಿ ಕಾರ್ಯ ಮಾಡಲಿ ಎನ್ನುವುದು ಸ್ಥಳೀಯರಾದ ಮಾಧವ ನಾಯಕ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬುಡಕಟ್ಟು ಸಿದ್ದಿ ಸಮುದಾಯದ ವಿಭಿನ್ನ ಪ್ರಯತ್ನ: ಹೋಂ ಸ್ಟೇ ಮೂಲಕ ಪ್ರವಾಸಿಗರಿಗೆ ಸಿದ್ದಿಗಳ ಆತಿಥ್ಯ