ಹುಬ್ಬಳ್ಳಿ: ಉತ್ತರ ಕರ್ನಾಟಕದ ಜನತೆಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ARO ( Asst.Regional office of BCAS) ಬ್ಯುರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿಯ ಸಹಾಯಕ ಪ್ರಾದೇಶಿಕ ಕಾರ್ಯಾಲಯ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಅನೋಮೋದನೆ ದೊರೆತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಪ್ರಲ್ಹಾದ್ ಜೋಶಿ ಅವರು, ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಹಾಯಕ ಪ್ರಾದೇಶಿಕ ಕಾರ್ಯಾಲಯ ಆರಂಭಿಸಲು ಈ ಹಿಂದಿನ ನಾಗರಿಕ ವಿಮಾನಯಾನ ಕೇಂದ್ರ ಸಚಿವ ಜ್ಯೋತಿರಾದಿತ್ಯ ಶಿಂಧೆ ಅವರಿಗೆ ನಾನು ಜನವರಿ 2024ರಲ್ಲಿ ವಿನಂತಿಸಿಕೊಂಡಿದೆ. ನಮ್ಮ ಮನವಿಗೆ ಸ್ಪಂದಿಸಿ ಏಪ್ರಿಲ್ 2024ರಲ್ಲಿ ಸಹಾಯಕ ಪ್ರಾದೇಶಿಕ ಕಾರ್ಯಾಲಯವನ್ನು ಆರಂಭಿಸಲು ತಾತ್ವಿಕ ಒಪ್ಪಿಗೆಯನ್ನು ನೀಡಲಾಗಿತ್ತು ಎಂದರು.
ಈಗ ಕೇಂದ್ರದ ಹಣಕಾಸು ಸಚಿವಾಲಯವು ಹೊಸ ಹುದ್ದೆಗಳ ಮಂಜೂರಾತಿಗೆ ಅನುಮತಿ ನೀಡಿದ್ದು ಹುಬ್ಬಳ್ಳಿಯ ಎ.ಆರ್.ಓ ಕಚೇರಿಗೆ ಕಾರ್ಯ ಆರಂಭಿಸಲಿದೆ. ಇನ್ನು ಮುಂದೆ ವಿಮಾನ ಸಿಲ್ದಾಣದ ಅಭಿವೃದ್ಧಿ ಕಾರ್ಯ ಮತ್ತು ಭದ್ರತೆ ಕುರಿತು ಬೆಂಗಳೂರು ಕಾರ್ಯಾಲಯದ ಅವಲಂಬನೆಯ ತಪ್ಪುತ್ತದೆ. ಉತ್ತರ ಕರ್ನಾಟಕದ ಇನ್ನಿತರ ವಿಮಾನ ನಿಲ್ದಾಣಗಳು ಸಹಿತ ಸೆಕ್ಯೂರಿಟಿ ಕುರಿತು ಹುಬ್ಬಳ್ಳಿ ಎ.ಆರ್. ಓ ಕಚೇರಿಯೊಂದಿಗೆ ವ್ಯವಹರಿಸಲಿವೆ ಎಂದು ತಿಳಿಸಿದರು.
ARO ಕಾರ್ಯಾಲಯ ಹುಬ್ಬಳ್ಳಿಗೆ ಬಂದಿರುವುದರಿಂದ ಸ್ಥಳೀಯ ಪ್ರಯಾಣಿಕರಿಗೆ ಅತ್ಯಂತ ಅನುಕೂಲಕರವಾಗಲಿದೆ. ವಿಮಾನ ನಿಲ್ದಾಣದಲ್ಲಿ ಜರುಗುವ ಅಹಿತಕರ ಘಟನೆಗಳು ಹಾಗೂ ಕಳ್ಳತನಗಳಿಗೆ ಸಂಬಂಧಿಸಿದಂತೆ ಇದೇ ಕಾರ್ಯಾಲಯದಲ್ಲಿ ದೂರು ನೀಡಬಹುದಾಗಿದೆ. ARO ಕಚೇರಿ ಆರಂಭದಿಂದಾಗಿ ಹೊಸ ಟರ್ಮಿನಲ್ ಅಭಿವೃದ್ಧಿ ಕಾರ್ಯಾಚರಣೆ, ವಿಮಾನ ನಿಲ್ದಾಣದ ಸುವ್ಯವಸ್ಥೆ ಮತ್ತು ಸುರಕ್ಷತೆಗೆ ಹೆಚ್ಚಿನ ಬಲ ದೊರೆತಂತಾಗಿದೆ ಎಂದು ಮಾಹಿತಿ ನೀಡಿದರು.
ಈ ARO ಕಚೇರಿ ಅನುಮೋದನೆ ಮತ್ತು ಹುದ್ದೆಗಳ ಸೃಜನೆಗೆ ಮಂಜೂರಾತಿ ಕೊಡುವ ಮೂಲಕ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಅತ್ಯಂತ ಮಹತ್ವ ನೀಡಿ ಇದರ ಬೆಳವಣಿಗೆಗೆ ವಿಶೇಷ ಆಸಕ್ತಿವಹಿಸಿರುವ ಪ್ರಧಾನಿ ನರೇಂದ್ರ ಮೋದಿ, ಹಿಂದಿನ ನಾಗರಿಕ ವಿಮಾನಯಾನ ಸಚಿವರಾಗಿದ್ದ ಜ್ಯೋತಿರಾದಿತ್ಯ ಶಿಂಧೆ ಮತ್ತು ಇಂದಿನ ನಾಗರಿಕ ವಿಮಾನಯಾನ ಸಚಿವ ರಾಮಮೋಹನಾ ನಾಯ್ಡು ಕಿಂಜಿರಾಪು ಮತ್ತು ಇದಕ್ಕೆ ಆರ್ಥಿಕ ಇಲಾಖೆಯ ಅನುಮೋದನೆ ನೀಡಿದ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಉತ್ತರ ಕರ್ನಾಟಕದ ಜನತೆಯ ಪರವಾಗಿ ಅನಂತ ಅನಂತ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ತಿಳಿಸಿದರು.