ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಬಂಧಿತರಾಗಿರುವ ಇಬ್ಬರು ಉಗ್ರರು ನಕಲಿ ಆಧಾರ್ ಕಾರ್ಡ್ನಲ್ಲಿ ಕೆಲವರ ಹೆಸರು ಬಳಸಿಕೊಂಡು ಪಶ್ಚಿಮ ಬಂಗಾಳದ ರಾಜಧಾನಿಯ ಕೋಲ್ಕತ್ತಾದಲ್ಲಿನ ಹೋಟೆಲ್ವೊಂದರಲ್ಲಿ ರೂಮ್ ಪಡೆದುಕೊಂಡಿದ್ದರು ಎಂಬ ವಿಚಾರ ಬಯಲಾಗಿದೆ.
ಬಂಧನಕ್ಕೊಳಗಾಗಿರುವ ಉಗ್ರರಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ತಮ್ಮ ಆಧಾರ್ ಕಾರ್ಡ್ಗಳನ್ನು ಕಲಬುರಗಿ ಹಾಗೂ ಥಾಣೆ ಮೂಲದ ಯುವಕರಿಬ್ಬರ ಹೆಸರಿನಲ್ಲಿ ಮಾಡಿಸಿಕೊಂಡಿದ್ದರು. ಇಬ್ಬರೂ ಸಹ ಮಹಾರಾಷ್ಟ್ರದ ಥಾಣೆ ಹಾಗೂ ಕರ್ನಾಟಕದ ಕಲಬುರಗಿ ನಗರದ ನಿವಾಸಿಗಳೆಂದು ಗುರುತಿಸಿಕೊಂಡಿದ್ದರು. ಈ ನಕಲಿ ಆಧಾರ್ ಕಾರ್ಡ್ ನೀಡಿ ಹೋಟೆಲ್ನಲ್ಲಿ ರೂಮ್ ಪಡೆದುಕೊಂಡಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ. ಸದ್ಯ ಈ ದಾಖಲಾತಿಗಳನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಉಗ್ರರ ಬಂಧನ ಪ್ರಕರಣದಲ್ಲಿ ಪಶ್ಚಿಮ ಬಂಗಾಳದಿಂದ ಮೂರು ದಿನಗಳ ಟ್ರಾನ್ಸಿಟ್ ವಾರಂಟ್ ಪಡೆಯಲಾಗಿದೆ. ಮೂರು ದಿನಗಳವರೆಗೆ ರಿಮಾಂಡ್ಗೆ ಪಡೆಯಲು ಕೋರ್ಟ್ಗೆ ನೀಡಿದ ಸಾಕ್ಷಿಗಳೇನು ಅಂತ ನೋಡುವುದಾದರೆ, ಬೆಂಗಳೂರು ರಾಮೇಶ್ವರಂ ಬಾಂಬ್ ಸ್ಫೋಟದ ರೂವಾರಿಗಳು ಇವರೇ ಎಂಬುದಕ್ಕೆ ಮಹತ್ವದ ಸಾಕ್ಷ್ಯಾಧಾರಗಳು ಲಭಿಸಿವೆ. ವಾಸ್ತವ್ಯ ಹೂಡಿದ್ದ ಹೋಟೆಲ್ನ ರೂಮ್ವೊಂದರಲ್ಲಿ ಬಂಧಿತರ ಬಳಿ ಇದ್ದ ಎಲೆಕ್ಟ್ರಿಕ್ ಡಿವೈಸ್ಗಳು ಪತ್ತೆಯಾಗಿವೆ. ಕೆಫೆ ಬಾಂಬ್ ಸ್ಫೋಟಕ್ಕೆ ಒಂದು ಗಂಟೆಯ ಅವಧಿ ಫಿಕ್ಸ್ ಮಾಡಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೆಫೆ ಸ್ಫೋಟ ಪ್ರಕರಣ: ಕೋಲ್ಕತ್ತಾದ ಲಾಡ್ಜ್‌ನಲ್ಲಿ ಗುರುತು ಬದಲಿಸಿಕೊಂಡು ಅಡಗಿದ್ದ ಉಗ್ರರು - Cafe Blast Case
ಅಬ್ದುಲ್ ಮತೀನ್ ತಾಹ ಮಂಗಳೂರು ಹಾಗೂ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಭಯೋತ್ಪಾದಕ ಚಟುವಟಿಕೆ ಸಂಬಂಧ ಬೆಂಗಳೂರಿನ ಸದ್ದುಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಗುರಪ್ಪನಪಾಳ್ಯದಲ್ಲಿ ಆತ ಇದ್ದ ಮನೆಯೊಂದರಲ್ಲಿ ಸಂಚು ಪ್ರಕರಣ ಸಂಬಂಧ ದಾಳಿ ನಡೆಸಿದಾಗ ಸ್ಫೋಟಕ ವಸ್ತುಗಳು ಸಿಕ್ಕಿದ್ದವು. ಈ ಪ್ರಕರಣದಲ್ಲಿ ಅಬ್ದುಲ್ ಮತಿನ್ ತಾಹ A12 ಹಾಗೂ ಮುಸಾವಿರ್ A17 ಆರೋಪಿಗಳಾಗಿದ್ದರು.
ಆರೋಪಿಗಳು ಅಂದಿನಿಂದ ತಲೆಮರೆಸಿಕೊಂಡು ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದರು. ಅಬ್ದುಲ್ ಮತಿನ್ ತಾಹಾ ಸೂಚನೆ ಮೇರೆಗೆ ಮುಸಾವಿರ್ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ. ಬಾಂಬ್ ಸ್ಫೋಟದಿಂದ 9 ಜನರಿಗೆ ಗಾಯವಾಗಿತ್ತು. ಉಗ್ರರಿಗೆ ವಿದೇಶಗಳಿಂದ ವಿದ್ವಂಸಕ ಕೃತ್ಯ ನಡೆಸಲು ಅಕ್ರಮ ಹಣ ಬಂದಿತ್ತು ಎಂದು ತಿಳಿದುಬಂದಿದೆ. ಹೀಗಾಗಿ ಇವರನ್ನು ಬೆಂಗಳೂರಿಗೆ ಕರೆದೊಯ್ದು ವಿಚಾರಣೆ ನಡೆಸಬೇಕಿದೆ ಎಂದು ಕೋಲ್ಕತ್ತಾದ ಎನ್ಐಎ ವಿಶೇಷ ಕೋರ್ಟ್ಗೆ ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೆಫೆ ಸ್ಫೋಟ ಪ್ರಕರಣ: ಶಂಕಿತ ಉಗ್ರರು ವಿಮಾನದ ಮೂಲಕ ಬೆಂಗಳೂರಿಗೆ - Cafe Bomb Blast Case