ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ವೇಳೆ ಉಪಕರಣ ಖರೀದಿ ಅಕ್ರಮ ಕುರಿತಂತೆ ನ್ಯಾ.ಮೈಕೆಲ್ ಡಿ.ಕುನ್ಹಾ ವಿಚಾರಣಾ ಆಯೋಗದ ಮಧ್ಯಂತರ ವರದಿ ಆಧರಿಸಿ ಕ್ರಮ ಜರುಗಿಸುವ ಕುರಿತು ರಾಜ್ಯ ಸಚಿವ ಸಂಪುಟ ಸಭೆ ಇಂದು ಮಹತ್ವದ ತೀರ್ಮಾನ ಕೈಗೊಂಡಿದೆ.
ಕೋವಿಡ್ ಹಗರಣ ಸಂಬಂಧ ತನಿಖೆಗಾಗಿ ಕ್ಯಾಬಿನೆಟ್ ಸಬ್ ಕಮಿಟಿ ಜೊತೆಗೆ ವಿಶೇಷ ತನಿಖಾ ದಳ (ಎಸ್ಐಟಿ) ರಚನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಂಪುಟ ಸಭೆ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಮಾರು 16 ವಿಷಯಗಳ ಕುರಿತು ಚರ್ಚೆಯಾಗಿದ್ದು, ಕೋವಿಡ್-19 ವೈದ್ಯಕೀಯ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ನೇಮಿಸಲಾದ ನ್ಯಾ.ಮೈಕಲ್ ಡಿ ಕುನ್ಹಾ ಅವರ ವಿಚಾರಣಾ ಆಯೋಗವು 2024, ಆಗಸ್ಟ್ 31 ರಂದು ಸಲ್ಲಿಸಿರುವ ಭಾಗಶ: ವರದಿಯ ಮೇಲೆ ಕೈಗೊಳ್ಳಬೇಕಾಗುವ ಕ್ರಮಗಳ ಕುರಿತು ಚರ್ಚೆ ನಡೆದಿದೆ. ಅದರ ಮೇಲೆ ಕೆಲವು ನಿರ್ಣಯ ಕೈಗೊಂಡಿದ್ದೇವೆ. ಆಯೋಗ 11 ಸಂಪುಟಗಳಲ್ಲಿ ವರದಿ ನೀಡಿದೆ. 7,223.64 ಕೋಟಿ ರೂ. ಮೊತ್ತದ ಅವ್ಯವಹಾರದ ತನಿಖೆ ನಡೆದಿದೆ. 500 ಕೋಟಿ ರೂ. ವಸೂಲಾತಿಗೆ ಆಯೋಗ ಶಿಫಾರಸು ಮಾಡಿದೆ. ಬಿಬಿಎಂಪಿ ನಾಲ್ಕು ವಲಯಗಳ ಹಾಗೂ 31 ಜಿಲ್ಲೆಗಳ ವರದಿ ಸಂಗ್ರಹ ಬಾಕಿ ಇದೆ. 55 ಸಾವಿರ ಕಡತಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದು ಪರಿಶೀಲಿಸಿ ವರದಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದರಲ್ಲಿ ಕ್ರಿಮಿನಲ್ ಕಂಟೆಂಟ್ ಇರುವುದರಿಂದ ಎಸ್ಐಟಿ ರಚನೆಗೆ ತೀರ್ಮಾನ ಮಾಡಲಾಗಿದೆ. ಇದರ ಜೊತೆಗೆ ಕ್ಯಾಬಿನೆಟ್ ಸಬ್ ಕಮಿಟಿ ಸಹ ರಚನೆ ಮಾಡಲು ನಿರ್ಧರಿಸಿದ್ದೇವೆ. 500 ಕೋಟಿ ರೂ. ವಸೂಲಾತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಕೋವಿಡ್ ಹಗರಣದಲ್ಲಿ ಭಾಗಿಯಾದ ಕಂಪನಿಗಳು, ಸಂಸ್ಥೆಗಳನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಲು ತೀರ್ಮಾನಿಸಲಾಗಿದೆ. ಎಲ್ಲೆಲ್ಲಿ ಅವ್ಯವಹಾರ ಆಗಿದೆ ಅದರ ಬಗ್ಗೆ ಎಸ್ಐಟಿ ತನಿಖಾ ತಂಡ ಗಮನಕೊಡಲಿದೆ. ಯಾರ ಪಾತ್ರ ಏನು ಎಂಬುದು ಎಸ್ಐಟಿ ತನಿಖೆಯಲ್ಲಿ ತಿಳಿದು ಬರಲಿದೆ. ಪೂರ್ಣ ವರದಿ ಬಂದ ಮೇಲೆ ಅವ್ಯವಹಾರ, ಇದರಲ್ಲಿ ಯಾರು ಪಾಲುದಾರರು ಎಂಬುದು ಗೊತ್ತಾಗುತ್ತದೆ. ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಆಗಲಿದೆ ಎಂದರು.
ಕೋವಿಡ್ ಹಗರಣದಲ್ಲಿ ಯಾರಿದ್ದಾರೆ ಎಂಬುದನ್ನು ನಾವು ಹೇಳುವುದಕ್ಕೆ ಆಗುವುದಿಲ್ಲ. ಯಾರಿದ್ದಾರೆ ಅಂತ ಕುನ್ಹಾ ಅವರು ಹೇಳಬೇಕು. ಸಂಪೂರ್ಣ ವರದಿ ಬಂದ ಮೇಲೆ ಅದು ಹೊರಬರಲಿದೆ. ಕುನ್ಹಾ ಆಯೋಗ ವೇಗದಿಂದ ಕೆಲಸ ಮಾಡ್ತಿದೆ. ನ್ಯಾಯ ಸಿಗುವ ವಿಶ್ವಾಸ ನಮಗಿದೆ ಎಂದು ತಿಳಿಸಿದರು.
ಸಂಪುಟ ಸಭೆಯಲ್ಲಿ ಸಿಎಂಗೆ ಬೆಂಬಲ: ಸಚಿವರ ಪ್ರತ್ಯೇಕ ಸಭೆ, ಭೇಟಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ. ಪಾಟೀಲ್, ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಬೆಂಬಲ ಸಿಕ್ಕಿದೆ. ಎಲ್ಲ ಸಚಿವರು ಕೂಡ ಇದ್ದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ರೂ ಬೇರೆ ಅರ್ಥ ಕೊಡ್ತೀರ, ಸಚಿವರು ಸಭೆ ಮಾಡಿದ್ರೂ ಅರ್ಥ ಕೊಡ್ತೀರ?. ಇದ್ಯಾವುದೂ ಇಲ್ಲ ಎಲ್ಲರೂ ಒಟ್ಟಾಗಿದ್ದೇವೆ. ಇವತ್ತು ಸಿಎಂಗೆ ಎಲ್ಲರೂ ಬೆಂಬಲ ಕೊಟ್ಟಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಕೋವಿಡ್ ಅಕ್ರಮ: ಪಿಪಿಇ ಕಿಟ್ ಖರೀದಿ ಆರೋಪ, ಓರ್ವ ಅಧಿಕಾರಿ ಸಸ್ಪೆಂಡ್