ಬೆಂಗಳೂರು : ಮುಡಾ ಹಗರಣದ ಹೋರಾಟ ತೀವ್ರಗೊಳಿಸಿರುವ ಬಿಜೆಪಿಯು ಬೆಂಗಳೂರಿನಿಂದ ಮೈಸೂರುವರೆಗೂ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ.
ವಿಧಾನಸಭೆ ಹಾಗೂ ಪರಿಷತ್ಗಳಲ್ಲಿ ಮುಡಾ ಹಗರಣದ ಬಗ್ಗೆ ಚರ್ಚೆಗೆ ಅನುಮತಿ ನಿರಾಕರಣೆ ಹಿನ್ನೆಲೆ ಮೈತ್ರಿಪಕ್ಷದ ಸದಸ್ಯರು ಗದ್ದಲ ನಡೆಸಿದ್ದರಿಂದ ಎರಡು ಸದನಗಳಲ್ಲಿ ಕಲಾಪ ಮುಂದೂಡಲಾಯಿತು. ಮುಂದಿನ ಹೋರಾಟದ ಕುರಿತಂತೆ ಸಭೆ ನಡೆಸಿ, ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮೇಲ್ಮನೆ ಸದಸ್ಯ ಸಿ. ಟಿ ರವಿ, ಮುಡಾ ಹಗರಣ ಸಂಬಂಧ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಜುಲೈ 28 ರಂದು ಹೆಚ್. ಡಿ ಕುಮಾರಸ್ವಾಮಿ ಜೊತೆ ಚರ್ಚೆ ನಡೆಸಿ, ದಿನಾಂಕ ನಿಗದಿಪಡಿಸಲಾಗುವುದು. ಪಾದಯಾತ್ರೆ ರೂಪುರೇಷೆ, ಸ್ವರೂಪದ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ಎನ್ಡಿಎ ನಾಯಕರೊಂದಿಗೆ ಚರ್ಚೆ ನಡೆಸಿದ ಬಳಿಕ ಸ್ಪಷ್ಟವಾಗಲಿದೆ ಎಂದು ಮಾಹಿತಿ ನೀಡಿದರು.
ಮುಡಾ ಹಗರಣ ಸಂಬಂಧ ನ್ಯಾಯಾಂಗ ತನಿಖೆ ನಡೆಸುತ್ತಿದೆ. ತನಿಖೆ ಮಧ್ಯದಲ್ಲಿ ತಾನು ಅಕ್ರಮವೆಸಗಿಲ್ಲ ಎಂಬುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಯಂಪ್ರೇರಿತವಾಗಿ ಕ್ಲೀನ್ ಚಿಟ್ ಪಡೆದಿದ್ದಾರೆ. ತನಿಖೆಗೂ ಮುನ್ನವೇ ಕ್ಲೀನ್ ಚಿಟ್ ಪಡೆದುಕೊಂಡರೆ ತನಿಖೆ ಯಾವ ರೀತಿಯಲ್ಲಿ ಸಾಗಲಿದೆ ಎಂದು ಪ್ರಶ್ನಿಸಿದ ಸಿ ಟಿ ರವಿ, ಪಾರದರ್ಶಕ ತನಿಖೆ ನಡೆಯಬೇಕಾದರೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಹೇಳಿದರು.
ಮೈಸೂರಿಗೆ, ಡೆಲ್ಲಿಗೆ ಪಾದಯಾತ್ರೆ ಮಾಡಲಿ, ನಾವು ಎಲ್ಲವನ್ನೂ ಬಹಿರಂಗ ಮಾಡುತ್ತೇವೆ: ಬಿಜೆಪಿಯವರೇ ಎಲ್ಲಾ ಸೈಟ್ ಹಂಚಿಕೊಂಡಿದ್ದಾರೆ. ಅವರದ್ದೆಲ್ಲ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಅವರ ಕಾಲದ ಎಲ್ಲಾ ಹಗರಣ ಬಿಚ್ಚಿಡುತ್ತೇವೆ. ಅವರು ಏಕೆ ಧರಣಿ ಮಾಡ್ತಿದ್ದಾರೆ ಅಂದ್ರೆ ಅವರ ಕಾಲದಲ್ಲಿನ ಹಗರಣದ ಬಗ್ಗೆ ಸಿಎಂ ಬಿಚ್ಚಿಟ್ರು. ಅದಕ್ಕೆ ಉತ್ತರ ಕೊಡಲು ಅವರಿಂದ ಸಾಧ್ಯವಾಗಿಲ್ಲ. ಹೀಗಾಗಿ ಅವರು ಧರಣಿ ಮಾಡ್ತಿದ್ದಾರೆ ಎಂದು ಟೀಕಿಸಿದರು.
89 ಕೋಟಿ ರೂ. ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗುತ್ತೆ. ಅವರ ಕಾಲದ ಸೈಟ್ ಹಂಚಿಕೆ ಹಗರಣದ ಬಗ್ಗೆಯೂ ತನಿಖೆ ಆಗಲಿ. ಸಿಎಂ ಅವರ ಜಮೀನು ಒತ್ತುವರಿ ಮಾಡ್ಕೊಂಡಿದ್ದು ನಿಜ ತಾನೇ. ಅದಕ್ಕಾಗಿ ಸಿಎಂ ಅವರಿಗೆ ಸೈಟ್ ಕೊಟ್ಟಿದ್ದಾರೆ. ಅವರು ಏನಾದರೂ ಇದ್ರೆ ತನಿಖಾ ಆಯೋಗಕ್ಕೆ ಕೊಡಲಿ. ಈ ವಿಚಾರ ಕಳೆದ ಎರಡು ವರ್ಷದ ಹಿಂದೆ ಇತ್ತು. ಆಗಲೇ ಏಕೆ ಇವರು ಮಾತನಾಡಿಲ್ಲ ಎಂದು ಪ್ರಶ್ನಿಸಿದರು.
ಮೈಸೂರು ಪಾದಯಾತ್ರೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೈಸೂರಿಗೆ, ಡೆಲ್ಲಿಗೆ ಪಾದಯಾತ್ರೆ ಮಾಡಲಿ, ನಾವು ಎಲ್ಲವನ್ನೂ ಬಹಿರಂಗ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ : ಮುಡಾ ಹಗರಣ ಚರ್ಚೆಗೆ ಸದನದಲ್ಲಿ ಸಿಗದ ಅವಕಾಶ: ಸಿ ಟಿ ರವಿ ಹೇಳಿದ್ದಿಷ್ಟು - Muda Scam