ಬೆಂಗಳೂರು: ಜಲಮಂಡಳಿ ವ್ಯಾಪ್ತಿಯಲ್ಲಿ ನೀರಿನ ಬಿಲ್ ಪಾವತಿ ಮಾಡದವರ ಸಂಖ್ಯೆೆ ಹೆಚ್ಚಾಗುತ್ತಿರುವ ಹಿನ್ನೆೆಲೆಯಲ್ಲಿ ಜಲಮಂಡಳಿಯು ಬಾಕಿ ವಸೂಲಿಗೆ ಬಿಬಿಎಂಪಿ ಹಾಗೂ ಸಂಚಾರಿ ಪೊಲೀಸ್ ಇಲಾಖೆಯ ಮಾರ್ಗವನ್ನು ಅನುಸರಿಸಲು ಮುಂದಾಗಿದೆ.
ನಗರದಲ್ಲಿ ಕೋಟಿಗಟ್ಟಲೆ ಬಿಲ್ ಬಾಕಿ ಉಳಿಸಿಕೊಂಡಿರುವವರಿಗಾಗಿ ಜಲಮಂಡಳಿಯು ಹೊಸ ಯೋಜನೆಯೊಂದನ್ನು ಸಿದ್ಧ ಮಾಡಿದ್ದು, ಬಿಬಿಎಂಪಿ ಹಾಗೂ ಸಂಚಾರಿ ಪೊಲೀಸರಂತೆ ಶೇ. 50 ರಿಯಾಯಿತಿಯಲ್ಲಿ ಬಾಕಿ ಬಿಲ್ ಪಾವತಿ ಮಾಡಲು ಅವಕಾಶ ನೀಡಲು ಮುಂದಾಗಿದೆ. ಈ ಮೂಲಕ ಕೋಟ್ಯಾಂತರ ರೂಪಾಯಿ ಬಾಕಿ ಬಿಲ್ ವಸೂಲಿ ಜೊತೆಗೆ ಸಾಲದ ಹೊರೆಯನ್ನು ಇಳಿಸಲು ಜಲಮಂಡಳಿ ನಿರ್ಧರಿಸಿದೆ.
ಜಲಮಂಡಳಿ ವ್ಯಾಪ್ತಿಯಲ್ಲಿ ಸದ್ಯ ನೀರಿನ ಬಾಕಿ ಪಾವತಿ ಮಾಡದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ನಾನಾ ಪ್ರಯತ್ನಗಳನ್ನು ಮಾಡಿದರೂ ಕೂಡಾ ಜಲಮಂಡಳಿಯ ಬಾಕಿ ಬಿಲ್ ಪಾವತಿಸಲು ಜನರು ಮುಂದಾಗುತ್ತಿಲ್ಲ. ಹೀಗಾಗಿ ಜಲಮಂಡಳಿಯು ಸಂಚಾರಿ ಪೊಲೀಸ್ ಇಲಾಖೆಯ ಹಾಗೆ ಶೇ.50 ಆಫರ್ ಹಾಗೂ ಪಾಲಿಕೆಯು ತೆರಿಗೆದಾರರಿಗೆ ನೀಡಿದ್ದ ಒನ್ ಟೈಮ್ ಸೆಟಲ್ಮೆಂಟ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಬಾಕಿ ಬಿಲ್ ವಸೂಲಿಗೆ ಮುಂದಾಗಿದೆ.
ಸದ್ಯ ಸರ್ಕಾರಿ, ಖಾಸಗಿ, ಎಲ್ಲಾ ಸೇರಿ ಸುಮಾರು 600 ಕೋಟಿಯಷ್ಟು ಬಾಕಿ ಬಿಲ್ ಜಲಮಂಡಳಿಗೆ ಪಾವತಿಯಾಗಬೇಕಿದೆ. ಸರ್ಕಾರಿ ಕಚೇರಿಗಳಿಂದಲೂ ಕೋಟಿ ಕೋಟಿ ನೀರಿನ ಬಿಲ್ ಬಾಕಿ ಉಳಿದಿದ್ದು, ಈ ಯೋಜನೆಯ ಮೂಲಕ ಬಾಕಿ ಬಿಲ್ ದೊರೆಯುವ ಸಾಧ್ಯತೆಯನ್ನು ಜಲಮಂಡಳಿ ಹೊಂದಿದೆ.
ಯಾವ್ಯಾವ ಇಲಾಖೆಯಿಂದ ಎಷ್ಟು ಹಣ ಬಾಕಿ?: ಬಿಬಿಎಂಪಿಯಿಂದ 23 ಕೋಟಿ ರೂಪಾಯಿ, ಕೇಂದ್ರ ಸರ್ಕಾರದ ಸಂಸ್ಥೆೆಗಳಿಂದ 60 ಕೋಟಿ ರೂಪಾಯಿ, ರಾಜ್ಯ ಸರ್ಕಾರದ ಸಂಸ್ಥೆೆಗಳಿಂದ 87 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಜೊತೆಗೆ ಡೊಮೆಸ್ಟಿಕ್ ಇಂಡಸ್ಟ್ರೀಗಳು, ಬಲ್ಕ್ ಸರಬರಾಜಿನ ಎಲ್ಲಾ ಭಾಗಗಳಿಂದ ಸುಮಾರು 220 ಕೋಟಿ ಬಾಕಿ ಸಂದಾಯ ಆಗಬೇಕಾಗಿದೆ. ಈ ಎಲ್ಲಾ ಬಾಕಿ ಬಿಲ್ ವಸೂಲಿಗೆ ಇದೀಗ ಶೇ. 50 ಆಫರ್ ಅಥವಾ ಒಟಿಎಸ್ ವ್ಯವಸ್ಥೆೆ ನೀಡಲು ಜಲಮಂಡಳಿ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ನೀಡಲು ತಯಾರಿ ನಡೆಸಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರು: ದೊಡ್ಡ ಪ್ರಮಾಣದಲ್ಲಿ ಬಳಸುವ ಗ್ರಾಹಕರಿಗೆ ನೀರು ಕಡಿತ - BWSSB