ದೊಡ್ಡಬಳ್ಳಾಪುರ: ಶುದ್ಧ ನೀರಿಗಾಗಿ ಆಗ್ರಹಿಸಿ ದೊಡ್ಡ ತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಜನರು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಚುನಾವಣೆ ಪ್ರಚಾರಕ್ಕೆಂದು ಗ್ರಾಮಕ್ಕೆ ಬರುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ನಮ್ಮ ಗ್ರಾಮಗಳಿಗೆ ಕಾಲಿಡದಂತೆ ಎಚ್ಚರಿಕೆ ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕ ತುಮಕೂರು ಮತ್ತು ದೊಡ್ಡ ತುಮಕೂರು ಕೆರೆಗಳು ವಿಷವಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲ ಸಹ ಕಲುಷಿತಗೊಂಡಿದ್ದು ಕುಡಿಯುವ ನೀರಿಗಾಗಿ ಗ್ರಾಮಸ್ಥರು ಹೋರಾಟಕ್ಕೆ ಧುಮುಕಿದ್ದಾರೆ. ದೊಡ್ಡಬಳ್ಳಾಪುರ ನಗರಸಭೆಯಿಂದ ಬರುವ ತ್ಯಾಜ್ಯ ನೀರು, ಬಾಶೆಟ್ಟಿಹಳ್ಳಿ ಪಟ್ಟಣ ಮತ್ತು ಕೈಗಾರಿಕಾ ಪ್ರದೇಶದಿಂದ ಬರುವ ವಿಷಕಾರಿ ನೀರು ನೇರವಾಗಿ ಕೆರೆಗಳ ಒಡಲು ಸೇರುತ್ತಿದೆ. ಈ ಕೆರೆಗಳು ಅರ್ಕಾವತಿ ನದಿ ಪಾತ್ರದ ಕೆರೆಗಳಾಗಿದ್ದು ಇಡೀ ಅರ್ಕಾವತಿ ನದಿಯೇ ಇಂದು ವಿಷವಾಗಿದೆ.
ಶುದ್ಧ ನೀರಿಗಾಗಿ ಕಳೆದ 3 ವರ್ಷಗಳಿಂದ ಅರ್ಕಾವತಿ ನದಿ ಹೋರಾಟ ಸಮಿತಿ ತೀರ್ವ ಸ್ವರೂಪದ ಹೋರಾಟ ಮಾಡುತ್ತಿದೆ. ಹೋರಾಟಕ್ಕೆ ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ. ಇದರಿಂದ ರೋಸಿ ಹೋಗಿರುವ ದೊಡ್ಡ ತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಿದ್ದಾರೆ, ಚುನಾವಣೆ ಪ್ರಚಾರಕ್ಕೆಂದು ಬರುವ ರಾಜಕೀಯ ಮುಖಂಡರು ಗ್ರಾಮಕ್ಕೆ ಕಾಲಿಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.
ಲೋಕಸಭಾ ಚುನಾವಣೆ ಬಹಿಷ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಗ್ರಾಮ ಪಂಚಾಯಿತಿಗಳ ಜನರು ಮಜರಾಹೊಸಹಳ್ಳಿ ಪತ್ರಿಕಾಗೋಷ್ಠಿಯನ್ನು ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅರ್ಕಾವತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಡಾ.ಆಂಜಿನಪ್ಪನವರು 'ಸರ್ಕಾರವನ್ನು ಎಚ್ಚರಿಸುವ ಕಾರಣಕ್ಕೆ ಲೋಕಸಭಾ ಚುನಾವಣೆ ಬಹಿಷ್ಕರಿಸುವ ತಿರ್ಮಾನಕ್ಕೆ ಬರಲಾಗಿದೆ. ಚುನಾವಣೆ ಬಹಿಷ್ಕಾರ ಮಾಡಿದರೆ ರಾಷ್ಟ್ರೀಯ ಗಮನ ಸೆಳೆಯಬಹುದು. ನನ್ನ ಮತ ಇಲ್ಲಿಲ್ಲ. ರಾಜಾಜಿನಗರದಲ್ಲಿ ನನ್ನ ವೋಟ್ ಇದ್ದು, ಅಲ್ಲಿಯೂ ನಾನು ವೋಟ್ ಮಾಡದೆ ಹೋರಾಟಕ್ಕೆ ಬೆಂಬಲಿಸುತ್ತೇನೆ' ಎಂದು ಹೇಳಿದರು.
ಬಮೂಲ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ 'ಹೋರಾಟದ ಪ್ರಾರಂಭಿಕ ಹಂತದಲ್ಲಿ ಎಡವಿದ ಪರಿಣಾಮ ಇವತ್ತು ನಾವು ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಬಾಶೆಟ್ಟಿಹಳ್ಳಿಗೆ ಕೈಗಾರಿಕೆಗಳು ಬಂದಾಗ ಈ ಪರಿಸ್ಠಿತಿಯ ಅರಿವೇ ನಮಗೆ ಇರಲಿಲ್ಲ. ಕೈಗಾರಿಕೆ ಬಂದು ಶೇಕಡಾ 10 ರಷ್ಟು ಜನರಿಗೆ ಮಾತ್ರ ಪ್ರಯೋಜನವಾಗಿದೆ. ಆದರೆ ಶೇಕಡಾ 90ರಷ್ಟು ಜನರ ಪಾಲಿಗೆ ಹಾನಿಕಾರವಾಗಿದೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಪರಿಹಾರ ಕೊಡಿಸುವ ಮಾನವೀಯತೆ ಇಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಮುಖಂಡರಾದ ಆದಿತ್ಯ ನಾಗೇಶ್ ಮಾತನಾಡಿ, 'ಕಳೆದ ಬಾರಿ ಹೋರಾಟ ಮಾಡಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ತಾತ್ಕಾಲಿಕ ಶಮನ ಮಾಡಿದರು. ಇದು ಶಾಶ್ವತ ಪರಿಹಾವಲ್ಲ, ಜಿಲ್ಲಾಧಿಕಾರಿಗಳು 2ನೇ ಹಂತದ ಸಂಸ್ಕರಣ ಘಟಕ ಸ್ಥಾಪಿಸುವುದಾಗಿ ಹೇಳಿದರು. ಆದರೆ ಘಟಕ ಸ್ಫಾಪನೆ ಮಾಡಲು ಭೂಸ್ವಾಧೀನವೇ ಆಗಿಲ್ಲ. ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ, ಕಳೆದೊಂದು ವರ್ಷದಿಂದ ಕೇವಲ ಆಶ್ವಾಸನೆಗಳನ್ನು ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖ ಒತ್ತಾಯಗಳೇನು..?:
- ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಒಳಚರಂಡಿ ನೀರಿಗಾಗಿ ಮೂರನೇ ಹಂತ ಶುದ್ದೀಕರಣ ಘಟಕವನ್ನು ಸ್ಥಾಪಿಸಬೇಕು.
- ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಆದಂತಹ ಕೆ.ಎಚ್. ಮುನಿಯಪ್ಪ ಅವರು ಎರಡು ಪಂಚಾಯತಿಯ ಎಲ್ಲ ಹಳ್ಳಿಗಳಿಗೆ ಕುಡಿಯಲು ಜಕ್ಕಲಮಡಗು ನೀರನ್ನು ವ್ಯವಸ್ಥೆ ಮಾಡಬೇಕೆಂದು ತಿಳಿಸಿದ್ದರು. ಆದರೆ ಅದು ಕೆಲವೇ ಹಳ್ಳಿಗಳಿಗೆ ಕೊಟ್ಟು ಉಳಿದ ಹಳ್ಳಿಗಳಿಗೆ ಕೊಡುತ್ತಿಲ್ಲ. ಎಲ್ಲ ಹಳ್ಳಿಗಳಿಗೂ ಕುಡಿಯಲು ಜಕ್ಕಲಮಡಗು ನೀರನ್ನು ವ್ಯವಸ್ಥೆಮಾಡಬೇಕು.
- ಎರಡು ಪಂಚಾಯತಿಯ ಪ್ರತಿ ಮನೆಗೆ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಬೇಕು, ಸದರಿ ಕಾಮಗಾರಿಗೆ ತಗುಲುವ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಅಥವಾ ಕಾರ್ಖಾನೆಗಳ ಧನಸಹಾಯದಿಂದ ಪ್ರತಿ ಮನೆಗೂ ಕುಡಿಯುವ ನೀರಿಗಾಗಿ ಮಳೆ ಕೊಯ್ಲು ಪದ್ಧತಿಯನ್ನು ಮಾಡಿಕೊಡಬೇಕು ಎಂಬುದಾಗಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಿ.ಹೆಚ್.ಕೆಂಪಣ್ಣ, ಟಿ. ರಂಗರಾಜು, ಸಂದೇಶ್, ಹಾಲಿ ಸದಸ್ಯರಾದ ಚೈತ್ರ ಭಾಸ್ಕರ್, ಮಾಜಿ ಉಪಾಧ್ಯಕ್ಷರಾದ ಚೈತ್ರ ಶ್ರೀಧರ್, ರೈತ ಮುಖಂಡರಾದ ವಸಂತ್, ಸತೀಶ್, ರಮೇಶ್, ಸೇರಿದಂತೆ ನೂರಾರು ರೈತರು ಎರಡು ಪಂಚಾಯಿತಿಯ ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ: ನಕಲಿ ಜಾತಿ ಪ್ರಮಾಣಪತ್ರ ಆರೋಪ ತಳ್ಳಿ ಹಾಕಿದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ - Raja Amareshwara Naik