ಆನೇಕಲ್: ತನಗೆ ನ್ಯಾಯ ನೀಡುವಂತೆ ಕಣ್ಣು ಕಾಣದ 79 ವಯಸ್ಸಿನ ಅಜ್ಜಿಯೊಬ್ಬರು ದಯಾಮರಣ ಅರ್ಜಿ ಪತ್ರದೊಂದಿಗೆ ಇಲ್ಲಿಯ ತಾಲೂಕು ಪಂಚಾಯಿತಿಗೆ ಆಗಮಿಸಿದ್ದರು. ತಾಲೂಕಿನ ನೆರಳೂರು ಗ್ರಾಮದ ನಾಗಮ್ಮ ದಯಾಮರಣ ಅರ್ಜಿ ಪತ್ರದೊಂದಿಗೆ ಆಗಮಿಸಿದ್ದ ವೃದ್ಧೆ.
''ತಾನು ವಾಸಿಸುತ್ತಿರುವ ಮನೆ ಇದೀಗ ರಾಜಕಾಲುವೆ ಮೇಲೆ ಬರುತ್ತಿದೆ ಎಂಬ ಕಾರಣ ನೀಡಿ ನನ್ನ ಮನೆಯ ಹಕ್ಕು ಪತ್ರ ನೀಡುತ್ತಿಲ್ಲ. ಅಲ್ಲದೇ ರಾಜಕಾಲುವೆ ಬಂದರೆ ನಿನ್ನ ಮನೆಯನ್ನು ನೆಲಸಮಗೊಳ್ಳುತ್ತದೆ ಎಂದು ಕೆಲವರು ಹೆದರಿಸುತ್ತಿದ್ದಾರೆ. ಕಳೆದ 25 ವರ್ಷಗಳಿಂದ ನಾನು ಇದೇ ಮನೆಯಲ್ಲಿ ವಾಸಿಸುತ್ತಿದ್ದೇನೆ. ನನಗೆ ಮಕ್ಕಳಿಲ್ಲ. ಸಾಕು ಮಕ್ಕಳಿದ್ದಾರೆ. ಅವರೇ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ಸಾಲಸೂಲ ಮಾಡಿ ಮನೆ ಕಟ್ಟಿರುವೆ. ಈಗ ಮನೆಯ ಹಕ್ಕು ಪತ್ರ ಕೇಳಿದರೆ ನಿಮ್ಮ ಮನೆ ರಾಜಕಾಲುವೆ ಮೇಲೆ ಬರುತ್ತಿದೆ, ಹಕ್ಕು ಪತ್ರ ನೀಡಲು ಸಾಧ್ಯವೆಂದು ಹೇಳುತ್ತಿದ್ದಾರೆ. ನಾನು ಬದುಕಿರುವವರೆಗೂ ನನಗೆ ನನ್ನ ಸೈಟ್ ಬೇಕು'' ಎಂದು ತಾಲೂಕು ಪಂಚಾಯಿತಿ ಮೆಟ್ಟಿಲೇರಿದ್ದಾರೆ.
''ನೆರಳೂರು ಗ್ರಾಮ ಪಂಚಾಯತಿ ವತಿಯಿಂದ ಕಳೆದ ಹಲವು ವರ್ಷಗಳ ಹಿಂದೆ ಆಶ್ರಮ ಸಮಿತಿಯಲ್ಲಿ ಸೈಟ್ ನೀಡಿದ್ದರು. ಹಂಚಿಕೆಯಾದ 136 ಸೈಟ್ಗಳ ಪೈಕಿ ನಮ್ಮ ಅಜ್ಜಿಗೂ ಸೈಟ್ ನೀಡಿದ್ದಾರೆ. ಪಟ್ಟಿ ಪ್ರಕಾರ ಎಲ್ಲ ಸೈಟ್ಗಳು ಸರಿ ಇದ್ದು, ಈಗ ಅವುಗಳ ಹಕ್ಕು ಪತ್ರ ನೀಡುತ್ತಿದೆ. ತನ್ನ ಸೈಟ್ನ ಹಕ್ಕು ಪತ್ರ ನೀಡುವಂತೆ ಅಜ್ಜಿ ಗ್ರಾಮ ಪಂಚಾಯತಿಗೆ ತೆರಳಿದಾಗ ನಿಮ್ಮ ಮನೆ ರಾಜಕಾಲುವೆ ಮೇಲೆ ಬರುತ್ತಿದೆ, ಹಕ್ಕು ಪತ್ರ ನೀಡಲಾಗುವುದಿಲ್ಲವೆಂದು ಹೇಳುತ್ತಿದ್ದಾರೆ. ನಮಗೆ ನ್ಯಾಯ ಬೇಕು. ನನ್ಮ ಸೈಟ್ ನಮಗೆ ಬೇಕು. ಹಾಗಾಗಿ ದಯಾಮರಣ ಅರ್ಜಿ ಪತ್ರದೊಂದಿಗೆ ನ್ಯಾಯಕ್ಕಾಗಿ ಆನೇಕಲ್ ತಾಲೂಕು ಪಂಚಾಯಿತಿಗೆ ಆಗಮಿಸಿರುವುದಾಗಿ'' ಸಾಕು ಮಗ ಶಂಕರ್ ಅಳಲು ತೋಡಿಕೊಂಡರು.
ಇದನ್ನು ಗಮನಿಸಿದ ಆನೇಕಲ್ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೆ ಮಂಜುನಾಥ್, ಕೂಡಲೇ ನೆರಳೂರು ಪಿಡಿಒಗೆ ಕರೆ ಮಾಡಿ ವಿಷಯ ಮುಟ್ಟಿಸಿ ನಂತರ ಅಜ್ಜಿಗೆ ಒಂದು ಸೂರಿನ ಭರವಸೆ ನೀಡಿ ಕಳುಹಿಸಿದರು.
''ತಮ್ಮ ಮನೆಯ ಹಕ್ಕು ಪತ್ರ ನೀಡುತ್ತಿಲ್ಲವೆಂದು ನಾಗಮ್ಮ ನಮ್ಮ ಬಳಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾರೆ. ಅಜ್ಜಿ ನೀಡುವ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಈಗಿರುವ ಅವರ ಮನೆ ಆಶ್ರಯ ಸಮಿತಿಯಲ್ಲಿ ಬರುತ್ತದೋ ಅಥವಾ ರಾಜಕಾಲುವೆ ಮೇಲೆ ಬರುತ್ತದೋ ಎನ್ನುವುದನ್ನು ಪರಿಶೀಲಿಸಬೇಕಿದೆ. ನೂಡಲ್ ವಸತಿ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ಮಾಡಲಾಗುವುದು. ಒಂದು ವೇಳೆ ಅಜ್ಜಿಯ ಮನೆ ಆಶ್ರಯ ಬಡಾವಣೆಯಲ್ಲಿ ಬಂದರೆ ಸ್ಥಳದಲ್ಲೇ ಹಕ್ಕುಪತ್ರ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ಬರದಿದ್ದರೂ ರಾಜಕಾಲುವೆ ಪಕ್ಕದಲ್ಲಿ ಅವರಿಗೆ ಒಂದು ನಿವೇಶನ ನೀಡುವ ವ್ಯವಸ್ಥೆಯನ್ನಾದರೂ ಮಾಡಿಕೊಡಲಾಗುತ್ತದೆ'' ಎಂದು ಮಂಜುನಾಥ್ ಭರವಸೆ ನೀಡಿದರು.
ಇದನ್ನೂ ಓದಿ: ಶೀಘ್ರದಲ್ಲೇ 'ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆ'ಯಡಿ ವಸತಿ ಸೌಲಭ್ಯ: ಎಲ್ಲೆಲ್ಲಿ ಜಾರಿ? - CM Multistorey Housing Scheme