ಬೆಂಗಳೂರು: ಸಿದ್ದರಾಮಯ್ಯನವರ ಸಮಾಜವಾದದ ಮುಖವಾಡ ಕಳಚಿ ಬಿದ್ದಿದೆ. ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹಕ್ಕೊತ್ತಾಯ ಮುಂದಿಟ್ಟರು.
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಇಂದು ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭ್ರಷ್ಟ ಕಾಂಗ್ರೆಸ್, ಭ್ರಷ್ಟ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ-ಜೆಡಿಎಸ್ ನಿರಂತರ ಹೋರಾಟ ನಡೆಸುತ್ತಿವೆ. ಈ ಹೋರಾಟ ಇದೀಗ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಮೈಸೂರಿನ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣಗಳು ಇದರಲ್ಲಿ ಪ್ರಮುಖವಾಗಿವೆ. ಮುಡಾದಡಿ 4ರಿಂದ 5 ಸಾವಿರ ಕೋಟಿ ರೂ.ಯ ನಿವೇಶನಗಳನ್ನು ನುಂಗಿ ಹಾಕಿದ್ದಾರೆ. ಇದನ್ನು ಖಂಡಿಸಿ, ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆ ಎಂದರು.
![Chalavadi Narayanaswamy](https://etvbharatimages.akamaized.net/etvbharat/prod-images/19-08-2024/kn-bng-04-bjp-jds-leaders-protest-by-vijayendra-talk-script-7208083_19082024143508_1908f_1724058308_379.jpg)
ಭಂಡತನ ಬಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಆದರೆ, ಅವರು ಗೂಂಡಾಗಿರಿಗೆ ಇಳಿದಿದ್ದಾರೆ. ರಾಜ್ಯಪಾಲರ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ಕೂಡಲೇ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಕಾಂಗ್ರೆಸ್ ಸರ್ಕಾರ ಇದೆ. ಹೈಕಮಾಂಡ್ ಕಾಪಾಡುವ, ಸಚಿವರು, ಶಾಸಕರು ಬೆನ್ನಿಗೆ ನಿಲ್ಲುವ ಭ್ರಮೆಯಿಂದ ಹೊರಕ್ಕೆ ಬನ್ನಿ. ಕಾನೂನನ್ನು ಎದುರಿಸಿ. ಪುಂಡಾಟಿಕೆ ಒಪ್ಪಲಾಗದು ಎಂದರು.
ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಂವಿಧಾನದ ಹುದ್ದೆಯಾದ ರಾಜ್ಯಪಾಲರಿಗೆ ಅವಮಾನ ಮಾಡಿದರೆ ಅದು ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಟೀಕಿಸಿದರು. ದಲಿತರನ್ನು ಸಿದ್ದರಾಮಯ್ಯನವರು ಸಂಪೂರ್ಣ ನಾಶ ಮಾಡಿದ್ದಾರೆ. ನಿಮ್ಮನ್ನು ನಂಬಿದ ದಲಿತರ ಚರ್ಮ ಸುಲಿದು ಚಪ್ಪಲಿ ಮಾಡಿದ್ದೀರಿ ಎಂದು ಆಕ್ಷೇಪಿಸಿದರು.
ಕಪ್ಪಗಿನ ಕಾಗೆಯಂತಿರುವ ಮುಖ್ಯಮಂತ್ರಿಗಳಲ್ಲಿ ಕಪ್ಪುಚುಕ್ಕಿ ಇರುವುದು ಹೇಗೆ ಎಂದು ಕೇಳಿದರು. ಕಾಂಗ್ರೆಸ್ ಎಂಬ ಕಸದ ಗುಂಡಿಗೆ ಇಳಿದ ನೀವು ಭ್ರಷ್ಟರಾಗದೇ ಇರಲು ಸಾಧ್ಯವೇ ಎಂದು ಪ್ರಶ್ನಿಸಿದರು. ಸುಳ್ಳು ಹೇಳುವುದರಲ್ಲಿ ವೀರಪ್ಪ ಮೊಯಿಲಿ ಅವರನ್ನೂ ಸಿದ್ದರಾಮಯ್ಯ ಮೀರಿಸಿದ್ದಾರೆ ಎಂದರಲ್ಲದೆ, ತಕ್ಷಣ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿದೆ. ಸಿಎಂ ಹುದ್ದೆ ಆಕಾಂಕ್ಷಿಗಳಾದ ಕಾಂಗ್ರೆಸ್ಸಿನ ಬಹಳ ಜನರಿಗೆ ಅನ್ಯಾಯ ಮಾಡಿದಿರಿ ಎಂದು ಕಿವಿಮಾತು ಹೇಳಿದರು. ಕಥೆ ಬಿಟ್ಟು ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು.
![BJP JDS protest near Gandhi statue at Vidhana Soudha](https://etvbharatimages.akamaized.net/etvbharat/prod-images/19-08-2024/kn-bng-04-bjp-jds-leaders-protest-by-vijayendra-talk-script-7208083_19082024143508_1908f_1724058308_985.jpg)
ವಿಧಾನಸಭೆಯ ಉಪ ನಾಯಕ ಅರವಿಂದ್ ಬೆಲ್ಲದ್ ಮಾತನಾಡಿ, ಸಿದ್ದರಾಮಯ್ಯನವರ ಸರ್ಕಾರದಲ್ಲಿ ಹಲವಾರು ಹಗರಣಗಳು ನಡೆದಿವೆ. ಇದು ಹಗರಣವೋ ಹಗರಣಗಳ ಸರ್ಕಾರ. ಸ್ವಚ್ಛ ಸಿದ್ದರಾಮಯ್ಯನವರ ಭ್ರಷ್ಟಾಚಾರ ನೋಡಿ, ನಗಬೇಕೋ, ಅಳಬೇಕೋ ಎಂದು ಜನರಿಗೆ ಗೊತ್ತಾಗುತ್ತಿಲ್ಲ ಎಂದರು.
ಮಾಜಿ ಸಚಿವ ಕೃಷ್ಣಾರೆಡ್ಡಿ ಮಾತನಾಡಿ, ಮುಖ್ಯಮಂತ್ರಿ ರಾಜೀನಾಮೆ ಕೊಡುವವರೆಗೆ ಎನ್‌ಡಿಎ ಅಂಗಪಕ್ಷಗಳಾದ ನಾವು ಹೋರಾಟ ಮಾಡಲಿದ್ದೇವೆ. ಅಹಿಂದದಲ್ಲಿ ‘ದ’ ಎಂಬ ಅಕ್ಷರವನ್ನು ಸಿದ್ದರಾಮಯ್ಯನವರು ನುಂಗಿಹಾಕಿದ್ದಾರೆ. ಇನ್ನೆರಡು ಅಕ್ಷರಗಳನ್ನು ಯಾವತ್ತು ನುಂಗುವರೋ ಗೊತ್ತಿಲ್ಲ. ಮುಖ್ಯಮಂತ್ರಿಯವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
![BJP-JDS protest](https://etvbharatimages.akamaized.net/etvbharat/prod-images/19-08-2024/kn-bng-04-bjp-jds-leaders-protest-by-vijayendra-talk-script-7208083_19082024143508_1908f_1724058308_509.jpg)
ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಎರಡೂ ಪಕ್ಷಗಳ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು ಮತ್ತು ವಿಧಾನಪರಿಷತ್ ಮಾಜಿ ಸದಸ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಈಗ ಯಾವ ನಾಲಿಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತಿದ್ದೀರಿ: ಸಿಎಂ ಸಿದ್ದರಾಮಯ್ಯ - Muda Scam