ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಬಿಜೆಪಿ, ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ಹಮ್ಮಿಕೊಂಡಿದ್ದು ಶಾಸಕರು, ಪರಿಷತ್ ಸದಸ್ಯರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ವಿಧಾನ ಪರಿಷತ್ ಸದಸ್ಯ ಸಿಟಿ ರವಿ, ನಾಳೆ ಬಿಜೆಪಿಯಿಂದ ದೊಡ್ಡ ಹೋರಾಟಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ, ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸಿಎಂ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ. ಶಾಸಕರು, ಸಂಸದರು ಹಾಗೂ ಹಿರಿಯ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.
ನಿಮ್ಮ ಬುದ್ಧಿವಂತಿಕೆ ಉತ್ತರ ಬೇಡ. ನಾಡಿನ ಜನರಿಗೆ ಪ್ರಾಮಾಣಿಕ ಉತ್ತರ ಬೇಕು. ಬುದ್ಧಿವಂತಿಕೆ ಉತ್ತರದಿಂದ ಕೆಲವರನ್ನ ನಂಬಿಸಬಹುದು. ಆದರೆ, ಎಲ್ಲರನ್ನಲ್ಲ, ನನಗೆ ಜೋತಿಷ್ಯ ಭವಿಷ್ಯ ಹೇಳೋಕೆ ಬರಲ್ಲ. ಅದರ ಅವಶ್ಯಕತೆ ಇಲ್ಲ. ಆದರೆ, ಪರಿಸ್ಥಿತಿ ನೋಡಿದರೆ ಅವರ ಪಕ್ಷದವರಿಂದಲೇ ಅವರು ರಾಜೀನಾಮೆ ಕೊಡುವ ಸನ್ನಿವೇಶ ಬರತ್ತದೆ. ಇದೊಂದು ತರಹ ಐಸಿಯುನಲ್ಲಿರೋ ಸರ್ಕಾರ. ಆಕ್ಸಿಜನ್ ಇರೋವರೆಗೆ ಉಸಿರಾಡುತ್ತೆ. ಆಮೇಲೆ ಇದ್ದೇ ಇದೆಯಲ್ಲ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಾಳೆ ರಾಜ್ಯ ಸರ್ಕಾರ & ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡ್ತಿದ್ದೇವೆ. ಸಿಎಂ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ ಮಾಡ್ತಿದ್ದೇವೆ. ವಿಧಾನಸೌಧ ಗಾಂಧಿ ಪ್ರತಿಮೆ ಮುಂಭಾಗ ನಡೆಸುತ್ತಿದ್ದೇವೆ. ಕೋರ್ಟ್ ತೀರ್ಪು ಬಂದ ತಕ್ಷಣವೇ ನಿನ್ನೆಯೇ ಸಿಎಂ ರಾಜೀನಾಮೆ ಕೊಡಬೇಕಾಗಿತ್ತು. ಹಿಂದೆ ಅಧಿಕಾರದಲ್ಲಿರೋರ ಮೇಲೆ ಆರೋಪ ಬಂದಾಗ ಅವರು ರಾಜೀನಾಮೆ ಕೊಡಬೇಕು ಅಂತ ನೀತಿ ಪಾಠ ಹೇಳ್ತಿದ್ರು. ಈಗ ಅದನ್ನ ಸಿದ್ದರಾಮಯ್ಯ ಅವರು ಪಾಲನೇ ಮಾಡಬೇಕು ಅಲ್ವಾ?ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಪರವಿದೆ ಎನ್ನುತ್ತಿದ್ದಾರೆ, ಕಾಂಗ್ರೆಸ್ ಹೈಕಮಾಂಡ್ ಕಾಂಗ್ರೆಸ್ ಜೊತೆ ಇಲ್ಲದೇ ಬಿಜೆಪಿ ಜೊತೆ ಇರುತ್ತಾ..? ಯಾರು ಯಾರ ಜೊತೆ ಇದ್ದರೂ ಕೋರ್ಟ್ ಆದೇಶ ಬದಲಾಗಲ್ಲ.ಈ ಸಮಾನ್ಯ ಜ್ಞಾನ ಇಲ್ಲದೇ ಇರೋದು ದೌರ್ಭಾಗ್ಯ ಎಂದು ಟೀಕಿಸಿದರು.