ಮೈಸೂರು: ಈಗಾಗಲೇ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಇನ್ನು ಕೃಷಿಗೆ ಎಲ್ಲಿಂದ ನೀರು ತರುವುದು? ಇದರ ನಡುವೆ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರಕ್ಕೆ ಉಚಿತ ಗ್ಯಾರಂಟಿಗಳನ್ನು ನೀಡುತ್ತಿವೆ. ಇದಕ್ಕೆ ಸಂಪನ್ಮೂಲಗಳನ್ನು ಎಲ್ಲಿಂದ ತರುವುದು?, ಉದ್ಯೋಗ ನೀಡುವುದು ಹೇಗೆ?, ಜನ ಜಾನುವಾರುಗಳು ಪರಿಸ್ಥಿತಿ ಹೇಗೆಂಬುದರ ಬಗ್ಗೆ ಯಾವುದೇ ನಾಯಕರು ಚಿಂತಿಸುತ್ತಿಲ್ಲ. ಗೆಲ್ಲಬೇಕು ಎಂಬ ಉದ್ದೇಶದಿಂದ ಉಚಿತ ಗ್ಯಾರಂಟಿಗಳನ್ನು ನೀಡುತ್ತಿದ್ದಾರೆ ಅಷ್ಟೇ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿಂದು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಮತ್ತೆ ದೇಶದ ಪ್ರಧಾನಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಈಗಿನ ಕಾಂಗ್ರೆಸ್‌ಗೆ ಅವಕಾಶ ಇಲ್ಲ. ದೇಶದ ದೊಡ್ಡ 5 ರಾಜ್ಯಗಳಲ್ಲಿ ಕಾಂಗ್ರೆಸ್ ಇಲ್ಲ ಎಂದರು.
ಲೋಕಸಭೆಯ ಮೊದಲ ಹಂತದ ಚುನಾವಣೆಗೆ ಎಲ್ಲ ಪಕ್ಷದ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಈಗಾಗಲೇ ಬಿಸಿಲು ಹೆಚ್ಚಾಗಿದ್ದು ಮನೆ-ಮನೆಗೆ ಹೋಗಿ ಮತ ಕೇಳುವ ಪರಿಸ್ಥಿತಿಯಲ್ಲಿಲ್ಲ. ಟಿವಿ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಇದರೊಂದಿಗೆ ಜಾಲತಾಣಗಳಲ್ಲಿಯೂ ಪ್ರಚಾರ ಜೋರಾಗಿದೆ. ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಬಿ.ವೈ.ವಿಜಯೇಂದ್ರ ಹಾಗೂ ಕುಮಾರಸ್ವಾಮಿ ಸೇರಿದಂತೆ ಹಲವರು ಪ್ರಚಾರ ಕೈಗೊಂಡಿದ್ದಾರೆ. ಕೆಲವರು ಮೋದಿ ಎಂದರೆ, ಮತ್ತೆ ಕೆಲವರು ಸೋನಿಯಾ ಗಾಂಧಿ ಎನ್ನುತ್ತಿದ್ದಾರೆ. ಪ್ರಚಾರದ ನಡುವೆ ಹಣ ಮತ್ತೆ ಹೆಂಡ ಹೆಚ್ಚಾಗಿ ಓಡಾಡುತ್ತಿದೆ. ಆದರೂ ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಚುನಾವಣೆ ನಡೆಸುತ್ತಿದೆ ಎಂದು ಹೇಳಿದರು.
ಮಹಾರಾಜರಿಗೆ ಅವಕಾಶ ಕೊಡಿ: ಕಾಂಗ್ರೆಸ್ ನಾಯಕರು ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಈ ಬಾರಿ 20 ಸ್ಥಾನ ಗೆಲ್ಲುತ್ತೇವೆಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಗೆಲ್ಲುತ್ತದೆ ಅಂತ ಜನ ಹೇಳಬೇಕು. ಕಾಂಗ್ರೆಸ್ ನಾಯಕರು ಹೇಳಿದರೆ ಅರ್ಥವಿಲ್ಲ. ಮೈಸೂರಿಗೆ ಮಹಾರಾಜರ ಕೊಡುಗೆ ಅಮೂಲ್ಯವಾದದ್ದು. ಅವರ ಕೊಡುಗೆಯನ್ನು ತೀರಿಸಲು ಯದುವಂಶದ ಕುಡಿ ಯದುವೀರ್ ಅವರಿಗೆ ಒಂದು ಮತ ಹಾಕಬೇಕು. ಆ ಮೂಲಕ ಮಹಾರಾಜರ ಋಣ ತೀರಿಸಬೇಕು ಎಂದು ಮನವಿ ಮಾಡಿದರು.
ಡಿಕೆಶಿ ಸಿಎಂ ಆಗಲಿದ್ದಾರೆಂದು ಮತ ಹಾಕಿದ್ದಾರೆ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಹಿಂದ ಮತಗಳೊಂದಿಗೆ ಒಕ್ಕಲಿಗ ಹಾಗೂ ವೀರಶೈವ ಜನಾಂಗದವರೂ ಮತ ಹಾಕಿದ್ದಾರೆ. ರಾಜ್ಯದಲ್ಲಿ 136 ಸೀಟ್ ಕಾಂಗ್ರೆಸ್‌ಗೆ ಬರಬೇಕಾದರೆ ನಿಜವಾಗಿಯೂ ಸಿದ್ದರಾಮಯ್ಯ ಅವರ ಕಾರ್ಯಕ್ರಮಗಳ ಜೊತೆಗೆ ಡಿ.ಕೆ.ಶಿವಕುಮಾರ್ ಕಮಿಟ್ಮೆಂಟ್ ಇದೆ. ಒಕ್ಕಲಿಗ ಸಮಾಜ ಕೂಡ ನಮ್ಮ ಸಮುದಾಯದ ಮುಖಂಡರಾದ ಡಿಕೆ ಶಿವಕುಮಾರ್ ಮುಂದೊಂದು ದಿನ ಮುಖ್ಯಮಂತ್ರಿಯಾಗುತ್ತಾರೆಂದು ಶೇ.40ರಷ್ಟು ಜನ ಕಾಂಗ್ರೆಸ್‌ಗೆ ಓಟ್ ಹಾಕಿದ್ದಾರೆ ಎಂದು ತಿಳಿಸಿದರು.