ಚಿಕ್ಕಬಳ್ಳಾಪುರ: ಹೊಸ ವರ್ಷದಂದು ಬೆಂಗಳೂರಿನ ಸಮೀಪವಿರುವ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಆದರೆ, ಇದೀಗ ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ಈ ಬಾರಿ ಹೊಸ ವರ್ಷಕ್ಕೆ ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದು, ಇದರಿಂದ ಪ್ರವಾಸಿಗರಿಗೆ ನಿರಾಸೆಯ ಸುದ್ದಿ ಸಿಕ್ಕಂತಾಗಿದೆ.
ಡಿಸೆಂಬರ್ 31ರ ಸಂಜೆ 6ರಿಂದ ಜನವರಿ 1ರ ಬೆಳಗ್ಗೆ 7 ಗಂಟೆವರೆಗೆ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ.
ನಂದಿ ಹಿಲ್ಸ್ಗೆ ಸಾರ್ವಜನಿಕರ ಪ್ರವೇಶ ಮತ್ತು ಹೊಸ ವರ್ಷ ನಿಮಿತ್ತ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೇ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಂದಿ ಬೆಟ್ಟದ ಸುತ್ತಮುತ್ತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ನಂದಿ ಗಿರಿಧಾಮದಲ್ಲಿ ನ್ಯೂಇಯರ್ ಸೆಲಬ್ರೆಷನ್‌ಗೆ ನಿರ್ಬಂಧವಿರುವ ಹಿನ್ನೆಲೆಯಲ್ಲಿ ನಂದಿ ಬೆಟ್ಟದ ಸುತ್ತ 150ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸುತ್ತೇವೆ ಎಂದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಹೇಳಿದ್ದಾರೆ.
ಜನವರಿ 1ರ ಬೆಳಗ್ಗೆ 7 ಗಂಟೆಯ ನಂತರ ಪ್ರವಾಸಿಗರು ಪ್ರಕೃತಿಯ ಸೊಬಗನ್ನು ಸವಿಯಲು ಅವಕಾಶವಿದ್ದು, ಪ್ರವಾಸಿಗರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಜಿಲ್ಲಾಧಿಕಾರಿ ಸೂಚನೆಗಳನ್ನು ಕೊಟ್ಟಿದ್ದಾರೆ.