ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ತನ್ನ ಸಾಮಾಜಿಕ ಹೊಣೆಗಾರಿಕೆಯಡಿ ವಿಶೇಷಚೇತನರಿಗೆ ರಿಯಾಯಿತಿ ದರದ ಬಸ್ ಪಾಸ್ ವಿತರಣೆ ಪ್ರಾರಂಭಿಸಿದೆ.
2025ನೇ ಸಾಲಿನ ಪಾಸ್‌ಗಾಗಿ ಅರ್ಹ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಡಿಸೆಂಬರ್ 30ರಿಂದ ಪಾಸ್ ವಿತರಣೆಯ ಪೋರ್ಟಲ್ ತೆರೆಯಲಾಗಿದೆ. ಅರ್ಹರು ತಾವು ಆಯ್ಕೆ ಮಾಡಿಕೊಂಡ ಬಸ್ ನಿಲ್ದಾಣಗಳಿಗೆ ತೆರಳಿ ದಾಖಲೆಗಳನ್ನು ಸಲ್ಲಿಸಿ, ಪಾಸ್‌ಗಳನ್ನು ಪಡೆಯಬಹುದು.
ವಿಶೇಷಚೇತನರ ನೂತನ ಪಾಸ್‌ಗಳನ್ನು ವರ್ಷವಿಡೀ ವಿತರಿಸಲಾಗುತ್ತದೆ. 2024ನೇ ಸಾಲಿನ ಬಸ್ ಪಾಸ್‌ಗಳನ್ನು ಫೆಬ್ರವರಿ 28ರೊಳಗೆ ನವೀಕರಿಸಿಕೊಳ್ಳಬೇಕು. ವಿಶೇಷಚೇತನರ ನೂತನ/ನವೀಕರಣ ಪಾಸಿನ ದರವನ್ನು 660 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ವಿಶೇಷಚೇತನರ ರಿಯಾಯಿತಿ ಬಸ್ ಪಾಸ್‌ಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶವಿದೆ. 2024ನೇ ಸಾಲಿನಲ್ಲಿ ವಿತರಿಸಿ ಡಿಸೆಂಬರ್ 31ರವರೆಗೆ ಮಾನ್ಯತೆ ಇರುವ ಪಾಸ್‌ಗಳನ್ನು ಫೆಬ್ರವರಿ 28ರವರೆಗೆ ಮಾನ್ಯ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ವಿಶೇಷಚೇತನರ ನೂತನ ಪಾಸ್‌ಗಳನ್ನು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಾತ್ರ ವಿತರಣೆ ಮಾಡಲಾಗುತ್ತದೆ. ಆದರೆ, ಕಳೆದ ಸಾಲಿನ ವಿಶೇಷಚೇತನರ ಪಾಸ್‌ಗಳ ನವೀಕರಣ ಮಾಡುವ ವ್ಯವಸ್ಥೆಯನ್ನು ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ ಬಸ್ ನಿಲ್ದಾಣ, ಶಾಂತಿನಗರ ಟಿಟಿಎಂಸಿ, ಕೃ.ರಾ.ಮಾರುಕಟ್ಟೆ ಬಸ್ ನಿಲ್ದಾಣ, ಬನಶಂಕರಿ ಟಿಟಿಎಂಸಿ, ಜಯನಗರ ಟಿಟಿಎಂಸಿ, ಕೆಂಗೇರಿ ಟಿಟಿಎಂಸಿ, ಹೊಸಕೋಟೆ ಬಸ್ ನಿಲ್ದಾಣ, ವಿಜಯನಗರ ಟಿಟಿಎಂಸಿ, ಯಶವಂತಪುರ ಟಿಟಿಎಂಸಿ, ವೈಟ್ ಫೀಲ್ಡ್ ಟಿಟಿಎಂಸಿ, ಯಲಹಂಕ ಹಳೆ ಬಸ್ ನಿಲ್ದಾಣ, ದೊಮ್ಮಲೂರು ಟಿಟಿಎಂಸಿಯಲ್ಲಿ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.