ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಡಿ ನ್ಯಾಯಾಂಗ ಬಂಧನದಲ್ಲಿರುವ ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.
ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಕರಣದಡಿ ಸೆ.21ರಂದು ಕಗ್ಗಲಿಪುರ ಪೊಲೀಸರು ಮುನಿರತ್ನರನ್ನು ಬಂಧಿಸಿದ್ದರು. ವಿಚಾರಣೆಯ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಸಂಬಂಧ ಸಲ್ಲಿಸಿದ್ದ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಲಯ ಇಂದಿಗೆ ಕಾಯ್ದಿರಿಸಿತ್ತು.
ಇಂದು ಆದೇಶ ಹೊರಡಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಮುನಿರತ್ನಗೆ ಜಾಮೀನು ನೀಡಿದೆ. ಆದೇಶದ ಪ್ರತಿಯನ್ನು ಸಂಜೆ 6 ಗಂಟೆಯೊಳಗೆ ಜೈಲಾಧಿಕಾರಿಗಳು ತಲುಪಿಸಿದರೆ ಇಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಆದೇಶ ತಲುಪಿಸಲು ಸಾಧ್ಯವಾಗದಿದ್ದರೆ ನಾಳೆ ಮುನಿರತ್ನ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಅತ್ಯಾಚಾರ ಪ್ರಕರಣದ ಇತರೆ ಆರೋಪಿಗಳಾದ ರೋಹಿತ್, ಕಿರಣ್ ಹಾಗೂ ಮಂಜುನಾಥ್ ಎಂಬವರಿಗೆ ನ್ಯಾಯಾಲಯ ನಿನ್ನೆ ನಿರೀಕ್ಷಣಾ ಜಾಮೀನು ನೀಡಿತ್ತು.
ಅತ್ಯಾಚಾರ ಪ್ರಕರಣ ದಾಖಲಾಗುವ ಮುನ್ನ ಬಿಬಿಎಂಪಿ ಗುತ್ತಿಗೆದಾರ ಹಾಗೂ ಮಾಜಿ ಪಾಲಿಕೆ ಸದಸ್ಯ ನೀಡಿದ್ದ ದೂರುಗಳ ಮೇರೆಗೆ ಜೀವ ಬೆದರಿಕೆ ಹಾಗೂ ಜಾತಿನಿಂದನೆಯಡಿ ವೈಯ್ಯಾಲಿಕಾವಲ್ ಠಾಣೆ ಪೊಲೀಸರು ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡು ಮುನಿರತ್ನ ಅವರನ್ನು ಮುಳಬಾಗಿಲಿನ ನಂಗಲಿ ಚೆಕ್‌ಪೋಸ್ಟ್ ಬಳಿ ಬಂಧಿಸಿದ್ದರು.
ಇದನ್ನೂ ಓದಿ: ವಾಲ್ಮೀಕಿ ನಿಗಮದ ಅವ್ಯವಹಾರ: ಮಾಜಿ ಸಚಿವ ಬಿ.ನಾಗೇಂದ್ರಗೆ ಜಾಮೀನು ಮಂಜೂರು