ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಪ್ರತಿಭಟನೆ ನಡೆಸುತ್ತಿವೆ. ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಉಪನಾಯಕ ಅರವಿಂದ್ ಬೆಲ್ಲದ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಸದಾನಂದ ಗೌಡ, ಮಾಜಿ ಸಚಿವರಾದ ಸುನೀಲ್ ಕುಮಾರ್, ಎಂಟಿಬಿ ನಾಗರಾಜ್, ಆರಗ ಜ್ಞಾನೇಂದ್ರ, ಮುನಿರತ್ನ, ಜೆಡಿಎಸ್ ನಾಯಕರಾದ ಕೃಷ್ಣಾರೆಡ್ಡಿ, ವೆಂಕಟರಾವ್ ನಾಡಗೌಡ, ಪರಿಷತ್ ಸದಸ್ಯ ಟಿ.ಎ.ಶರವಣ, ಸಿ.ಟಿ.ರವಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಮಾಜಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, "ಕಾಂಗ್ರೆಸ್ ನಾಯಕರು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಸಂವಿಧಾನಬಾಹಿರ. ರಾಜ್ಯಪಾಲರು ಸಿದ್ದರಾಮಯ್ಯ ಅಪರಾಧಿ ಅಂತ ಘೋಷಿಸಿಲ್ಲ. ತನಿಖೆಗೆ ಕಾನೂನಾತ್ಮಕ ಅನುಮತಿ ಕೊಟ್ಟಿದ್ದಾರೆ ಅಷ್ಟೇ. ಕಾಂಗ್ರೆಸ್ನವರು ರಾಜ್ಯದ ಜನರ ಕಿವಿಗೆ ಹೂ ಮುಡಿಸುತ್ತಿದ್ದಾರೆ. ಏನೋ ಆಗಿದೆ ಅಂತ ಬಿಂಬಿಸುತ್ತಿದ್ದಾರೆ. ಹಿಂದೆಯೂ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದರು. ಮುಡಾ ಚರ್ಚೆ ಮಾಡದೇ ಸಿದ್ದರಾಮಯ್ಯ ಬೆನ್ನು ತೋರಿಸಿ ಓಡಿ ಹೋದರು. ಸತ್ಯವಂತರಾಗಿದ್ರೆ ಚರ್ಚೆಗೆ ಅವಕಾಶ ಕೊಡಬೇಕಿತ್ತು" ಎಂದರು.
"ರಾಜ್ಯಪಾಲರು ಸಂವಿಧಾನದ ಅಡಿಯಲ್ಲಿ ಏನು ಮಾಡಬೇಕೋ ಮಾಡಿದ್ದಾರೆ. ಹಿಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೂ ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ಉದಾಹರಣೆ ಇದೆ. ಇದೇನು ಮೊದಲೇನಲ್ಲ. ಸ್ಪೀಕರ್ ಸ್ಥಾನ ದುರುಪಯೋಗ ಮಾಡಿಕೊಂಡು ಬೆನ್ನು ತೋರಿಸಿ ಓಡಿಹೋದರು. ನೀವು ಕಾನೂನಿನ ಚೌಕಟ್ಟಿನಲ್ಲಿ ಇದ್ದರೆ, ಯಾಕೆ ಓಡಿಹೋದಿರಿ?. ಸದನದಲ್ಲಿ ಚರ್ಚೆಗೆ ಅವಕಾಶ ಕೊಡಬಹುದಿತ್ತು. ಸದನ ಆರಂಭದ ಒಂದು ದಿನ ಮೊದಲು ಆಯೋಗ ರಚನೆ ಮಾಡಿದ್ದೀರಿ. ಇಡೀ ಕ್ಯಾಬಿನೆಟ್, ರಾಜ್ಯದ ಶಾಸಕರು, ಕಾರ್ಯಕರ್ತರು ನನ್ನ ಜೊತೆ ಇದ್ದಾರೆ ಅಂತೀರಿ. ಎಲ್ಲರೂ ನಿಮ್ಮ ಜೊತೆ ಇರೋ ಮಾತ್ರಕ್ಕೆ, ಅನ್ಯಾಯ ನ್ಯಾಯ ಆಗುತ್ತಾ" ಎಂದು ಪ್ರಶ್ನಿಸಿದರು.
"ಡಿ.ಕೆ.ಶಿವಕುಮಾರ್ ನಿಮ್ಮ ಜೊತೆ ನಾನಿದ್ದೇನೆ ಅಂತ ಬೊಬ್ಬೆ ಹೊಡೆದಿದ್ದೂ, ಹೊಡೆದಿದ್ದೇ. ಆದರೆ, ಆ ಬಂಡೆ ಮೇಲೆ ಬಿದ್ರೆ, ನೀವು ಅಪ್ಪಚ್ಚಿ ಆಗ್ತೀರಾ" ಎಂದು ವ್ಯಂಗ್ಯವಾಡಿದರು.
"ಸಿದ್ದರಾಮಯ್ಯ ಅವರೇ ದಯವಿಟ್ಟು ರಾಜೀನಾಮೆ ಕೊಡಿ. ಸಾರ್ವಜನಿಕ ಜೀವನದಲ್ಲಿ ನೈತಿಕತೆ ಅನ್ನೋದಿದೆ. ನೀವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬಹುದು. ಮತ್ತೆ ಮುಕ್ತವಾಗಿ ಮುಖ್ಯಮಂತ್ರಿ ಆಗಬಹುದು. ಯಡಿಯೂರಪ್ಪ ಅವರ ಮೇಲೆ ಕಳಂಕ ಬಂದಾಗ ಕೆಳಗಿಳಿದಿದ್ರು. ಸಿದ್ದರಾಮಯ್ಯ ಶುದ್ಧರಾಮಯ್ಯ ಆಗಿ ಹೊರಬರಲಿ. ನೀವು ಗಲೀಜು ರಾಮಯ್ಯ ಆಗಿದ್ದೀರಿ. ಕೋರ್ಟ್ಗೆ ಹೋಗಿದ್ದೀರಿ, ಹೋರಾಟ ಮಾಡಿ ಬೇಡ ಎನ್ನುವುದಿಲ್ಲ. ಗೌರವಯುತವಾಗಿ ರಾಜೀನಾಮೆ ಕೊಡಿ" ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಈಗ ಯಾವ ನಾಲಿಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತಿದ್ದೀರಿ: ಸಿಎಂ ಸಿದ್ದರಾಮಯ್ಯ - Muda Scam