ಬೆಂಗಳೂರು: ವ್ಹೀಲಿಂಗ್ ಪ್ರಾಣಕ್ಕೆ ಅಪಾಯಕಾರಿ ಎಂದು ತಿಳಿದಿದ್ದರೂ ಪದೇ ಪದೆ ನಿಯಮ ಉಲ್ಲಂಘಿಸುತ್ತಿರುವ ವಾಹನ ಸವಾರರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬೈಕ್ ವ್ಹೀಲಿಂಗ್ನಿಂದಾಗಿ ಸಾವು-ನೋವುಗಳ ಪ್ರಮಾಣ ತಗ್ಗಿಸಲು ಕಾರ್ಯಾಚರಣೆ ಬಿಗಿಗೊಳಿಸಿರುವ ನಗರ ಸಂಚಾರ ಪೊಲೀಸರು, ಕಳೆದ ಮೂರು ವರ್ಷಗಳಲ್ಲಿ 827 ಪ್ರಕರಣಗಳನ್ನು ದಾಖಲಿಸಿ 683 ಸವಾರರನ್ನು ಬಂಧಿಸಿದ್ದಾರೆ.
ಸುಗಮ ಸಂಚಾರ ಹಾಗೂ ಅಪಘಾತ ನಿಯಂತ್ರಿಸಲು ರಾಜಧಾನಿಯ ಮುಖ್ಯರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವವರ ಸಂಖ್ಯೆ ಅಧಿಕವಾಗುತ್ತಿದೆ. ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿದರೂ ಪ್ರಯೋಜನವಾಗದ ಕಾರಣ ದಂಡಂ-ದಶಗುಣಂ ಎಂಬ ನಿರ್ಧಾರಕ್ಕೆ ಬಂದಿರುವ ಸಂಚಾರ ಪೊಲೀಸರು, ವ್ಹೀಲಿಂಗ್ ಮಾಡುವವರ ವಿರುದ್ಧ ಸಮರ ಸಾರಿದ್ದಾರೆ.
2022ರಲ್ಲಿ 283, 2023ರಲ್ಲಿ 219 ಹಾಗೂ ಈ ವರ್ಷ ಅಕ್ಟೋಬರ್ ಅಂತ್ಯಕ್ಕೆ 325 ಸೇರಿ ಒಟ್ಟು 827 ಪ್ರಕರಣ ದಾಖಲಿಸಿದ್ದು, 683 ಮಂದಿಯನ್ನು ಬಂಧಿಸಲಾಗಿದೆ. 677 ಬೈಕ್ ಜಪ್ತಿ ಮಾಡಲಾಗಿದೆ. ವ್ಹೀಲಿಂಗ್ ಮಾಡಿದವರ ಪೈಕಿ 170 ಮಂದಿ ಅಪ್ರಾಪ್ತರೆಂಬುದು ಗಮನಾರ್ಹ. 40,27 ಲಕ್ಷ ರೂ ದಂಡ ವಸೂಲಿ ಮಾಡಿದ್ದು, ಈ ಪೈಕಿ 17.92 ಲಕ್ಷ ರೂ ದಂಡ ಕಟ್ಟಿಸಿಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ನೀಡಿದ ಅಂಕಿ-ಅಂಶಗಳು ತಿಳಿಸಿವೆ.
ಇದೇ ಡಿ.2ರಿಂದ 12ರವರೆಗೆ ಒಟ್ಟು 10 ದಿನಗಳಲ್ಲಿ 76 ವ್ಹೀಲಿಂಗ್ ಪ್ರಕರಣಗಳನ್ನು ದಾಖಲಿಸಿ 75 ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ. 45 ಮಂದಿಯ ವಾಹನ ಪರವಾನಗಿ (ಡಿಎಲ್) ವಶಕ್ಕೆ ಪಡೆದುಕೊಂಡರೆ, 15 ಮಂದಿ ಡಿಎಲ್ ರದ್ದುಗೊಳಿಸಲು ಆರ್ಟಿಒ ಶಿಫಾರಸು ಮಾಡಲಾಗಿದೆ. ಅಪ್ರಾಪ್ತರೂ ಒಳಗೊಂಡಂತೆ 70 ಮಂದಿ ವಾಹನ ಸವಾರರನ್ನು ಬಂಧಿಸಲಾಗಿದ್ದು, ಈ ಪೈಕಿ ನಾಲ್ವರು ಗಾಂಜಾ ಸೇವಿಸಿ ಸಿಕ್ಕಿಬಿದ್ದಿದ್ದಾರೆ ಎಂಬುದು ಪೊಲೀಸರು ನೀಡಿರುವ ಮಾಹಿತಿ.
ಈ ರಸ್ತೆಗಳೇ ವ್ಹೀಲಿಂಗ್ ಹಾಟ್ ಸ್ಪಾಟ್: ಯುವಕರು ಹೆಚ್ಚಾಗಿ ಸಂಚಾರ ದಟ್ಟಣೆಯಿಲ್ಲದ ಪ್ರದೇಶಗಳಲ್ಲಿ ವ್ಹೀಲಿಂಗ್ ಮಾಡುತ್ತಾರೆ. ನಗರದ ಹೊರವರ್ತುಲ ರಸ್ತೆಗಳು, ಏರ್ಪೋರ್ಟ್ ರೋಡ್, ನೈಸ್ ರಸ್ತೆ, ಸುಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ ರಸ್ತೆ ಹಾಗೂ ಮೇಲುಸೇತುವೆಗಳಲ್ಲಿ ವ್ಹೀಲಿಂಗ್ ಮಾಡುವುದಲ್ಲದೇ ರೋಡ್ ರೇಜ್ ಪ್ರಕರಣಗಳಲ್ಲಿ ಭಾಗಿಯಾಗಿರುವ ನಿದರ್ಶನಗಳಿವೆ. ಇದರಿಂದ ಅಪಘಾತಗಳಾಗಿ ಸಾವು-ನೋವುಗಳಿಗೂ ಕಾರಣವಾಗಿದೆ.
"ವ್ಹೀಲಿಂಗ್ ಮಾಡುವುದು ಅಪಾಯಕಾರಿ ಎಂದು ತಿಳಿದಿದ್ದರೂ ವ್ಹೀಲಿಂಗ್ ಮಾಡುವ ಸವಾರರ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲೂ ಅಪ್ರಾಪ್ತರ ಕೈಗೆ ದ್ವಿಚಕ್ರ ವಾಹನ ನೀಡಿ ಪೋಷಕರು ಹಾಗೂ ಮಾಲೀಕರು ಅವಾಂತರಗಳಿಗೆ ಕಾರಣರಾಗುತ್ತಿದ್ದಾರೆ. ಹೀಗಾಗಿ ವ್ಹೀಲಿಂಗ್ ಮಾಡುವವರ ವಿರುದ್ಧ ಕಾರ್ಯಾಚರಣೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಚುರುಕುಗೊಳಿಸಲಾಗುವುದು" ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಕಳೆದ 3 ವರ್ಷಗಳಲ್ಲಿ ದಾಖಲಾಗಿರುವ ವ್ಹೀಲಿಂಗ್ ಪ್ರಕರಣಗಳು: