ಬೆಂಗಳೂರು: ಸಿಗ್ನಲ್ ಜಂಪ್ ಮಾಡಿ ಟ್ರಾಫಿಕ್ ಕಾನ್ಸ್ಟೇಬಲ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ ಆರೋಪದಡಿ ಬೈಕ್ ಸವಾರನನ್ನ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸದಾಶಿವನಗರ ಸಂಚಾರ ಠಾಣೆಯ ಕಾನ್ಸ್ಟೇಬಲ್ ಶಿವರಾಜ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರತೀಕ್ ಎಂಬಾತನನ್ನ ಬಂಧಿಸಲಾಗಿದೆ.
ಮಾರ್ಚ್ 19ರ ರಾತ್ರಿ 8.30ರ ಸುಮಾರಿಗೆ ಸದಾಶಿವನಗರದ ಪಿಎಸ್ ಜಂಕ್ಷನ್ ಬಳಿ ಶಿವರಾಜ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಎಂ.ಎಸ್.ರಾಮಯ್ಯ ಜಂಕ್ಷನ್ ಕಡೆಯಿಂದ ಹೋಂಡಾ ಆಕ್ಟೀವಾದಲ್ಲಿ ಯುವತಿ ಜೊತೆಗೆ ಆರೋಪಿ ಪ್ರತೀಕ್, ಸಿಗ್ನಲ್ ಜಂಪ್ ಮಾಡಿದ್ದಾನೆ. ಬಳಿಕ ಸಿಗ್ನಲ್ ಕಂಟ್ರೋಲ್ ಮಾಡುತ್ತಿದ್ದ ಐಲ್ಯಾಂಡ್ ಬಳಿ ಬಂದು ಸರಿಯಾಗಿ ಸಿಗ್ನಲ್ ಕೊಡುವುದಕ್ಕೆ ಆಗಲ್ವಾ ಎಂದು ಟ್ರಾಫಿಕ್ ಕಾನ್ಸ್ಟೇಬಲ್ಗೆ ಪ್ರಶ್ನಿಸಿದ್ದಾನೆ. ಜೊತೆಯಲ್ಲಿ ಬಂದಿದ್ದ ಯುವತಿಯು ಪೊಲೀಸರಿಗೆ ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದರೂ ಕೇಳದೇ ಅವಾಚ್ಯ ಶಬ್ಧಗಳಿಂದ ಕಾನ್ಸ್ಟೇಬಲ್ಗೆ ನಿಂದಿಸಿದ್ದ. ಆತನನ್ನ ಹಿಡಿಯಲು ಮುಂದಾದಾಗ ತಪ್ಪಿಸಿಕೊಳ್ಳುವ ಭರದಲ್ಲಿ ಕೈಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ.
ಈ ವೇಳೆ ಸಾರ್ವಜನಿಕರ ನೆರವಿನಿಂದ ಆತನನ್ನ ಹಿಡಿದು ಸದಾಶಿವನಗರ ಠಾಣೆಯ ಕಾನೂನು ವ್ಯವಸ್ಥೆ ಪೊಲೀಸರ ವಶಕ್ಕೆ ನೀಡಿದ್ದರು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿ: ಪಿಡಿಒ ಮೇಲೆ ಗ್ರಾ.ಪಂ. ಸದಸ್ಯನಿಂದ ಹಲ್ಲೆ ಆರೋಪ; ಸಿಸಿಟಿವಿಯಲ್ಲಿ ದೃಶ್ಯ ಸೆರೆ