ಮೈಸೂರು: ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಅರಳಿ ಮರವೊಂದು ಬೇರು ಸಮೇತ ಉರುಳಿದ ಪರಿಣಾಮ ಸಮೀಪದಲ್ಲಿದ್ದ ನಾಲ್ಕು ಮನೆಗಳು ಜಖಂಗೊಂಡಿರುವ ಘಟನೆ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದಲ್ಲಿ ನಡೆದಿದೆ.
ಸಾಕಷ್ಟು ವರ್ಷಗಳ ಕಾಲದ ಬೃಹತ್ ಅರಳಿ ಮರ ಬಿದ್ದ ಪರಿಣಾಮ ಬಸವನಪುರ ಗ್ರಾಮದ ಸಿದ್ದರಾಜು, ಮೂಗಯ್ಯ, ಮಲ್ಲೇಶ್, ಚೆನ್ನೇಗೌಡ ಎಂಬುವವರ ಮನೆಗಳ ಮೇಲೆ ಉರುಳಿ ಬಿದ್ದಿದ್ದು ಕುಟುಂಬಸ್ಥರು ಮತ್ತು ಜಾನುವಾರುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ಯಾವುದೇ ಅವಘಡ ಸಂಭವಿಸಿಲ್ಲ. ಸ್ಥಳಕ್ಕೆ ನಂಜನಗೂಡಿನ ಚೆಸ್ಕಾಂ ಅಧಿಕಾರಿಗಳು ಧಾವಿಸಿ ಮುರಿದು ಬಿದ್ದಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿದ್ದಾರೆ. ಹಾನಿಯಾಗಿರುವ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ಥಳೀಯರಾದ ಸಣ್ಣೇಗೌಡ ಮಾತನಾಡಿ, ನಿನ್ನೆ ತಡರಾತ್ರಿ ಸುರಿದ ಭಾರಿ ಗಾಳಿ - ಮಳೆಯಿಂದಾಗಿ 13 ವಿದ್ಯುತ್ ಕಂಬಗಳು ಮತ್ತು ಮನೆಗಳಿಗೆ ಹಾನಿಯಾಗಿದೆ. ಇದರಿಂದ ಮೂರ ಲಕ್ಷದಷ್ಟು ನಷ್ಟ ಉಂಟಾಗಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಹಾನಿಗೊಳಗಾಗಿರುವ ಮನೆಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮೈಸೂರು: ಬರಗಾಲದಲ್ಲಿ ವರವಾಗಿ ಬಂದ ವರುಣ, ಈಶ್ವರಗೌಡನಹಳ್ಳಿ ಗ್ರಾಮದಲ್ಲಿ ಹಬ್ಬದ ಸಂಭ್ರಮ - heavy rain
ಚಾಮರಾಜನಗರದಲ್ಲಿ ವರುಣನ ಆರ್ಭಟ: ಮತ್ತೊಂದೆಡೆ, ಚಾಮರಾಜನಗರದಲ್ಲಿ ಎರಡು ದಿನ ಸಾಧಾರಣ ಮಳೆಯಾಗಿ ಬಿಡುವು ನೀಡಿದ್ದ ವರುಣ ಇಂದು ಮಧ್ಯಾಹ್ನ ದಿಢೀರ್ ಎಂಟ್ರಿ ಕೊಟ್ಟು ಇಳೆಗೆ ತಂಪೆರೆದಿದ್ದಾನೆ. ಚಾಮರಾಜನಗರ ಜಿಲ್ಲಾ ಕೇಂದ್ರ ಹಾಗೂ ತಾಲೂಕಿನಾದ್ಯಂತ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು - ಸಿಡಿಲು ಆರ್ಭಟದೊಂದಿಗೆ ಜೋರು ಮಳೆಯಾಗಿದ್ದು, ಬಿಸಿಲಿನಿಂದ ಬಸವಳಿದಿದ್ದ ಜನರು ಸಂತಸಗೊಂಡಿದ್ದಾರೆ.
ಚಾಮರಾಜನಗರ, ಚಾಮರಾಜನಗರ ತಾಲೂಕಿನ ಹರದನಹಳ್ಳಿ, ಬ್ಯಾಡಮೂಡ್ಲು, ಹೆಬ್ಬಸೂರು, ಚಂದಕವಾಡಿ, ಮರಿಯಾಲ, ಕೆಲ್ಲಂಬಳ್ಳಿ ಸುತ್ತಮುತ್ತ ಉತ್ತಮ ಮಳೆಯಾಗಿದೆ.ಇನ್ನು, ಬಿರುಗಾಳಿ ರಭಸಕ್ಕೆ ಚಾಮರಾಜನಗರದ ಚಾಮರಾಜೇಶ್ವರ ಉದ್ಯಾನವನದ ಭುವನೇಶ್ವರಿ ವಿಗ್ರಹದ ಬಳಿ ಭಾರಿ ಮರವೊಂದು ಧರೆಗುರುಳಿದೆ. ಅದೃಷ್ಟವಶಾತ್ ಆ ವೇಳೆ, ಉದ್ಯಾನವನದಲ್ಲಿ ಯಾರೂ ಇಲ್ಲದಿದ್ದರಿಂದ ಪ್ರಾಣಹಾನಿ ತಪ್ಪಿದೆ. ಹೆಬ್ಬಸೂರು, ಬ್ಯಾಡಮೂಡ್ಲು ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಮಳೆಗೆ ಎಕರೆ ಗಟ್ಟಲೆ ಬಾಳೆ ಫಸಲು ನೆಲಕಚ್ಚಿದೆ.