ಬೀದರ್: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕೇಂದ್ರ ಸಚಿವ ಭಗವಂತ ಖೂಬಾಗೆ ಮತದಾರರು ಶಾಕ್ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ. 26ರ ಹರೆಯದ ಅಭ್ಯರ್ಥಿಯಾಗಿರುವ ಸಾಗರ್ ಖಂಡ್ರೆ ಮೊದಲ ಯತ್ನದಲ್ಲೇ ಕೇಂದ್ರ ಸಚಿವರನ್ನು ಸೋಲಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಈ ಬಾರಿಯ ಲೋಕಸಭೆ ಚುಣಾವಣೆಯಲ್ಲಿ ಬಿಹಾರದ ಸಮಷ್ಟಿಪುರ ಕ್ಷೇತ್ರದಿಂದ ಎಲ್ಜೆಪಿ ಅಭ್ಯರ್ಥಿ ಶಾಂಭವಿ ಚೌಧರಿ (ವ. 25) ಅವರು ಕಾಂಗ್ರೆಸ್ ಅಭ್ಯರ್ಥಿ ಸನ್ನಿ ಹಜಾರಿ ಅವರನ್ನು 1,87,537 ಮತಗಳಿಂದ ಸೋಲಿಸಿದ್ದಾರೆ. ಈ ಮೂಲಕ ಶಾಂಭವಿ ಅವರು ಸಂಸತ್ಗೆ ಆಯ್ಕೆಯಾದ ದೇಶದ ಅತಿ ಕಿರಿಯ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ ರಾಜಸ್ಥಾನದ ಭರತ್‌ಪುರ ಕ್ಷೇತ್ರದಲ್ಲಿ ವಿಜಯ ಸಾಧಿಸಿರುವ ಕಾಂಗ್ರೆಸನ ಸಂಜನಾ ಜಾತವ್ ಅವರೂ ಅತಿ ಕಿರಿಯ ಸಂಸದರಲ್ಲಿ ಒಬ್ಬರು. ಉತ್ತರ ಪ್ರದೇಶದ ಪುಷ್ಪೇಂದ್ರ ಸರೋಜ್, ಪ್ರಿಯಾ ಸರೋಜ್ ಕೂಡ 25 ವಯೋಮಾನದ ವಿಜೇತ ಅಭ್ಯರ್ಥಿಗಳಾಗಿದ್ದಾರೆ.
ಸಾಗರ್ ಖಂಡ್ರೆಗೆ ಚೊಚ್ಚಲ ಗೆಲುವು: ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಾಗರ್ ಖಂಡ್ರೆಗೆ ಇದು ಚೊಚ್ಚಲ ಲೋಕಸಭಾ ಚುನಾವಣೆಯಾಗಿದೆ. ವೃತ್ತಿಯಲ್ಲಿ ವಕೀಲರಾಗಿರುವ ಸಾಗರ್ ಅವರು ಸಚಿವ ಈಶ್ವರ್ ಖಂಡ್ರೆ ಅವರ ರಾಜಕೀಯದ ನೆರಳಿನಲ್ಲಿ ಕಣಕ್ಕಿಳಿದಿದ್ದಾರೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಇವರು, ಬೀದರ್ ಜಿಲ್ಲೆಯ ಪ್ರಭಾವಿ ಖಂಡ್ರೆ ಕುಟುಂಬದ ಕುಡಿ.
ಭಗವಂತ ಖೂಬಾ: ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿರುವ ಭಗವಂತ ಖೂಬಾ ಅವರು ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಬೀದರ್ನಿಂದ 2014ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಈಶ್ವರ್ ಖಂಡ್ರೆ ಅವರ ವಿರುದ್ಧ ಗೆಲುವು ಸಾಧಿಸಿದ್ದರು.
ಭಗವಂತ್ ಖೂಬಾ ಅವರು 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿ 'ಹ್ಯಾಟ್ರಿಕ್' ಗುರಿ ಹೊಂದಿದ್ದರು. ಖೂಬಾ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು, ಬಿಜೆಪಿ ಪಾಳಯದಲ್ಲಿ ಅಸಮಾಧಾನ ಉಂಟಾಗಿತ್ತು. ಆದಾಗ್ಯೂ ಹೈಕಮಾಂಡ್ ಅವರನ್ನೇ ಕಣಕ್ಕಿಳಿಸಿತ್ತು. 2019ರ ಚುನಾವಣೆಯಲ್ಲಿ ಖೂಬಾ ಅವರು 5.85 ಲಕ್ಷ ಮತಗಳನ್ನು ಗಳಿಸಿ ಈಶ್ವರ್ ಖಂಡ್ರೆ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಖಂಡ್ರೆ ಅವರು 4,68,637 ಮತ ಪಡೆದಿದ್ದರು.
ಕ್ಷೇತ್ರ, ಮತದಾರರ ಮಾಹಿತಿ: ಬೀದರ್ ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ, ಆಳಂದ, ಬೀದರ್ ಜಿಲ್ಲೆಯ ಬಸವಕಲ್ಯಾಣ, ಹುಮ್ನಾಬಾದ್, ಬೀದರ್ ದಕ್ಷಿಣ, ಭಾಲ್ಕಿ ಮತ್ತು ಔರಾದ್ ಕ್ಷೇತ್ರಗಳು ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಕ್ಷೇತ್ರದಲ್ಲಿ ಒಟ್ಟು 18,92,962 ಸಾಮಾನ್ಯ ಮತದಾರರಿದ್ದರೆ, 1,402 ಸೇವಾ ಮತದಾರರಿದ್ದಾರೆ. ಕ್ಷೇತ್ರಕ್ಕೆ ಎರಡನೇ ಹಂತದಲ್ಲಿ ಚುನಾವಣೆ ನಡೆದಿದ್ದು, ಶೇಕಡಾ 63.55 ರಷ್ಟು ಮತದಾನವಾಗಿತ್ತು. 2019 ರ ಚುನಾವಣೆಯಲ್ಲಿ ಶೇಕಡಾ 62.94ರಷ್ಟು ಮತದಾನ ದಾಖಲಾಗಿತ್ತು.