ಹುಬ್ಬಳ್ಳಿ: ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ನೇರ ಆಹಾರ ಉತ್ಪನ್ನ ಪೂರೈಕೆ ಈಗ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರ ತವರು ಕ್ಷೇತ್ರದಲ್ಲಿ ಆರಂಭವಾಗಿದೆ.
ರಾಜ್ಯದಲ್ಲಿ ಬೆಂಗಳೂರಿನ ಬಳಿಕ ಇದೀಗ ಚೋಟಾ ಮುಂಬೈ ಎಂದೇ ಖ್ಯಾತಿಯಾದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲೂ ಭಾರತ್ ಬ್ರ್ಯಾಂಡ್ ಅಡಿ ನೇರವಾಗಿ ಗ್ರಾಹಕರಿಗೆ ಆಹಾರೋತ್ಪನ್ನ ವಿತರಣೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಗರದಲ್ಲಿಂದು ವಿಧ್ಯುಕ್ತ ಚಾಲನೆ ನೀಡಿದರು.
ಹುಬ್ಬಳ್ಳಿಯ ಮೂರುಸಾವಿರ ಮಠದ ಶಾಲಾ ಆವರಣದಲ್ಲಿ ಕಡಿಮೆ ಬೆಲೆಯಲ್ಲಿ ಪೂರೈಸುವ 'ಭಾರತ್ ಬ್ರ್ಯಾಂಡ್' ಆಹಾರ ಉತ್ಪನ್ನಗಳ ವಿತರಣೆಗೆ ಚಾಲನೆ ನೀಡುತ್ತಿದಂತೆ ಜನಸಾಮಾನ್ಯರು ಮುಗಿಬಿದ್ದು ಅಗತ್ಯ ವಸ್ತುಗಳನ್ನು ಖರೀದಿಸಿದರು.
ಈ ಕುರಿತು ಬಸವರಾಜ್ ಹಾಗೂ ಸುವರ್ಣ ಎಂಬವರು ಮಾತನಾಡಿ, "ಇತ್ತೀಚಿಗೆ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರಿಗೆ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು ಕಡಿಮೆ ದರದಲ್ಲಿ ಬೇಳೆ, ಅಕ್ಕಿ, ಗೋಧಿ ಹಿಟ್ಟು ಮಾರಾಟ ಮಾಡುವುದರಿಂದ ನಮ್ಮಂಥ ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ" ಎಂದರು.
ಅಗತ್ಯ ಆಹಾರೋತ್ಪನ್ನಗಳ ಬೆಲೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ ಮೊದಲಿಗೆ ದೆಹಲಿಯಲ್ಲಿ 29 ರೂ. ದರದಲ್ಲಿ 10 ಕೆ.ಜಿ. ಪ್ಯಾಕೆಟ್ ಭಾರತ್ ಅಕ್ಕಿ ಬಿಡುಗಡೆ ಮಾಡಿ ಮೊಬೈಲ್ ವಾಹನಗಳ ಮೂಲಕ ದೇಶಾದ್ಯಂತ ಹಂಚಿತ್ತು. ಕ್ರಮೇಣ, ಭಾರತ್ ಅಕ್ಕಿ ಜೊತೆಗೆ ಆಯಾ ರಾಜ್ಯ ಮತ್ತು ಪ್ರದೇಶವಾರು ಬೇಡಿಕೆಗೆ ತಕ್ಕಂತೆ ಕಡಿಮೆ ಮಾರುಕಟ್ಟೆಗಳಲ್ಲಿ 35 ರೂ. ಕೆ.ಜಿ. ದರದಲ್ಲಿ ಈರುಳ್ಳಿ ಸರಬರಾಜು ಮಾಡಿತ್ತು.
ಆನ್‌ಲೈನ್ ಹಾಗು ಸ್ಮಾರ್ಟ್ ಬಜಾರ್ಗಳಲ್ಲೂ ಲಭ್ಯ: "ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರೈತರು ಹಾಗೂ ಕೊನೆಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಜನರ ಅಗತ್ಯತೆಗೆ ಅನುಗುಣವಾಗಿ ನಮ್ಮಲ್ಲಿರುವ ಬಫರ್ ಸ್ಟಾಕ್ (ದಾಸ್ತಾನಿನ)ನಲ್ಲಿರುವ ಆಹಾರವನ್ನು ಕೈಗೆಟುಕುವ ದರದಲ್ಲಿ ವಿತರಿಸುತ್ತಿದ್ದೇವೆ. ಪ್ರತೀ ವರ್ಷ 10 ಸಾವಿರ ಕೋಟಿ ಹಣ ವ್ಯಯಿಸುವ ಮೂಲಕ ಅಕ್ಕಿ ಕೆ.ಜಿಗೆ 34 ರೂ., ಕಡಲೆಬೇಳೆಯನ್ನು 70.ರೂ., ತೊಗರಿಬೆಳೆ 107 ರೂ. ಹಾಗೂ ಗೋಧಿ ಹಿಟ್ಟನ್ನು 30 ರೂ.ಗೆ ವಿತರಿಸುವ ಮೂಲಕ ಜನರಿಗೆ ಗುಣಮಟ್ಟದ ಆಹಾರ ಒದಗಿಸಲಾಗುತ್ತದೆ" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಪೌರಕಾರ್ಮಿಕರ ವಸತಿ ಯೋಜನೆಗೆ ಗ್ರಹಣ: 16 ವರ್ಷದಿಂದ ಸಿಗದ ಅನುಮೋದನೆ