ಬೆಂಗಳೂರು: ಬಾಂಗ್ಲಾದೇಶ ಮೂಲದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿರುವ ಘಟನೆ ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಲ್ಕೆರೆ ಲೇಕ್ ಬಳಿ ನಿರ್ಜನ ಪ್ರದೇಶದಲ್ಲಿ ಕತ್ತು ಹಿಸುಕಿ, ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಸ್ಥಿತಿಯಲ್ಲಿ ಬಾಂಗ್ಲಾದೇಶ ಮೂಲದ 28 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶ ಮೂಲದ ಮಹಿಳೆ ಹಾಗೂ ಆಕೆಯ ಪತಿ ಕಳೆದ ಆರು ವರ್ಷಗಳಿಂದಲೂ ಮೂವರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು. ನಗರದ ಖಾಸಗಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಹಿಳೆ ಮನೆಗೆಲಸ ಮಾಡಿಕೊಂಡಿದ್ದಳು. ಗುರುವಾರ ಕೆಲಸ ಮುಗಿಸಿ ಅಪಾರ್ಟ್‌ಮೆಂಟ್‌ನಿಂದ ತೆರಳಿದ್ದ ಮಹಿಳೆ, ಮನೆಗೆ ಮರಳಿರಲಿಲ್ಲ. ಬೆಳಗ್ಗೆ ಕಲ್ಕೆರೆ ಸಮೀಪದ ನಿರ್ಜನ ಪ್ರದೇಶದಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ರಾಮಮೂರ್ತಿನಗರ ಠಾಣೆ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಸೋಕೋ ಟೀಂ ಸಿಬ್ಬಂದಿ ಭೇಟಿ ನೀಡಿ, ತಪಾಸಣೆ ನಡೆಸಿದ್ದಾರೆ.
''ಮಹಿಳೆಯ ಪತಿ ಪಾಸ್‌ಪೋರ್ಟ್ ಮೂಲಕವೇ ಭಾರತಕ್ಕೆ ಬಂದಿದ್ದಾರೆ. ಆದರೆ ಹತ್ಯೆಯಾದ ಮಹಿಳೆಯು ಪಾಸ್‌ಪೋರ್ಟ್ ಇಲ್ಲದೆ, ಅಕ್ರಮವಾಗಿ ಬಂದಿರುವುದು ಸದ್ಯಕ್ಕೆ ತಿಳಿದು ಬಂದಿದೆ. ಪತಿ ನೀಡಿರುವ ದೂರಿನ ಅನ್ವಯ ಲೈಂಗಿಕ ದೌರ್ಜನ್ಯ ಹಾಗೂ ಹತ್ಯೆಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ'' ಎಂದು ಬೆಂಗಳೂರು ಪೂರ್ವ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಬಸ್‌ಗೆ ಕಾಯುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ದೂರು ದಾಖಲು - GANG RAPE
ಪ್ರತ್ಯೇಕ ಪ್ರಕರಣ: ಇತ್ತೀಚೆಗಷ್ಟೇ ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಮೊಬೈಲ್, ನಗದು ಹಾಗೂ ಚಿನ್ನಾಭರಣ ದೋಚಿರುವ ಆರೋಪ ಕೇಳಿ ಬಂದಿತ್ತು. ಜನವರಿ 19ರಂದು ರಾತ್ರಿ 11:30ರ ಸುಮಾರಿಗೆ ಕೆ.ಆರ್.ಮಾರ್ಕೆಟ್ ಬಳಿಯ ಗೋಡೌನ್ ಸ್ಟ್ರೀಟ್‌ನಲ್ಲಿ ಘಟನೆ ನಡೆದಿದೆ ಎಂದು ಆರೋಪಿಸಿ 37 ವರ್ಷದ ಮಹಿಳೆಯೊಬ್ಬರು ಕೇಂದ್ರ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.