ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ತೆಲುಗು ನಟಿ ಹೇಮಾ ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕಳೆದ 12 ದಿನಗಳಿಂದ ಜೈಲುವಾಸ ಅನುಭವಿಸುತ್ತಿದ್ದ ಅವರಿಗೆ ಜೂನ್ 12ರಂದು ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ಇದಾದ ಎರಡು ದಿನಗಳ ಜೈಲಿನಿಂದ ಹೊರಬಂದಿದ್ದಾರೆ.
ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ಎಂ.ಫಾರ್ಮ್ ಹೌಸ್ನಲ್ಲಿ ಮೇ 20ರಂದು ರೇವ್ ಪಾರ್ಟಿ ನಡೆಸಲಾಗಿತ್ತು. ಇದರಲ್ಲಿ ಡ್ರಗ್ಸ್ ಸೇವನೆ ಆರೋಪದಡಿ ಹೇಮಾ ಅವರನ್ನು ಜೂನ್ 3ರಂದು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದರು. ನಂತರ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿತ್ತು. ಇದರ ನಡುವೆ ಜೂ.12ರಂದು ಷರತ್ತುಬದ್ಧ ಜಾಮೀನು ಸಿಕ್ಕಿತ್ತು. ಕೋರ್ಟ್ ಷರತ್ತುಗಳನ್ನು ಒದಗಿಸುವಲ್ಲಿ ತಡವಾದ ಹಿನ್ನೆಲೆಯಲ್ಲಿ ಇಂದು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ರೇವ್ ಪಾರ್ಟಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಡ್ರಗ್ಸ್ ಬಳಕೆ ಮಾಹಿತಿ ಮೇರೆ ದಾಳಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಬಳಿಕ ಹೇಮಾ ಸೇರಿ 86 ಮಂದಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿತ್ತು. ಪ್ರಕರಣದ ಆರಂಭದಲ್ಲಿ ತಾನು ಪಾರ್ಟಿಯಲ್ಲಿ ಇರಲಿಲ್ಲ ಎಂದು ನಟಿ ವಿಡಿಯೋ ಹೇಳಿಕೆ ನೀಡಿದ್ದರು. ಆದರೆ, ಬಂಧಿತರಾಗಿದ್ದ ವಾಸು, ಅರುಣ್, ಸಿದ್ದಿಕ್, ರಣದೀರ್ ಹಾಗೂ ರಾಜ್ ಭಾವ ಎಂಬುವರ ವಿಚಾರಣೆ ವೇಳೆ ಹೇಮಾ ಸಹ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ವಿಷಯ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಬೆಂಗಳೂರಲ್ಲಿ ರೇವ್ ಪಾರ್ಟಿ ಪ್ರಕರಣ: ತೆಲುಗು ನಟಿ ಹೇಮಾಗೆ 14 ದಿನ ನ್ಯಾಯಾಂಗ ಬಂಧನ