ಬೆಂಗಳೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ನಗರದ ರೌಡಿ ಶೀಟರ್ಗಳು ಹಾಗೂ ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವವರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಪಶ್ಚಿಮ ಹಾಗೂ ಕೇಂದ್ರ ವಿಭಾಗದ ಪೊಲೀಸರು ದಾಳಿ ನಡೆಸಿದ್ದು, ಅಪರಾಧ ಚಟುವಟಿಕೆ, ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವ ರೌಡಿಗಳ ಮನೆಗಳಲ್ಲಿ ಪರಿಶೀಲನೆ ಕೈಗೊಂಡಿದ್ದಾರೆ.
ಇಂದು ಬೆಳಗ್ಗೆ 5 ಗಂಟೆಯಿಂದ 7 ಗಂಟೆವರೆಗೂ ನಡೆದ ತಪಾಸಣೆಯಲ್ಲಿ ಕಲಾಸಿಪಾಳ್ಯ, ಕಾಟನ್ ಪೇಟೆ, ಸಿಟಿ ಮಾರ್ಕೆಟ್, ಕೆಂಗೇರಿ, ವಿಜಯನಗರ ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಲಾಗಿದೆ. ರೌಡಿಶೀಟರ್ಗಳ ಸದ್ಯದ ವಿಳಾಸ, ಆದಾಯದ ಮೂಲ, ಫೋನ್ ನಂಬರ್ ಸೇರಿದಂತೆ ಸಂಪೂರ್ಣ ವಿವರ ಪಡೆದುಕೊಳ್ಳಲಾಗಿದೆ. ಅಲ್ಲದೆ ವಾರಂಟ್ ಜಾರಿಯಾಗಿದ್ದರೂ ಸಹ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕೆಲವರನ್ನ ವಶಕ್ಕೆ ಪಡೆಯಲಾಗಿದೆ.
ಚುನಾವಣೆ ಸಮಯದಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಕೂಡದು, ಯಾವುದೇ ಪಕ್ಷ, ಅಭ್ಯರ್ಥಿಯ ಪರ ಮತ ಚಲಾಯಿಸುವಂತೆ ಯಾರ ಮೇಲೂ ಒತ್ತಡ ಹೇರಬಾರದು. ರಾಜಕೀಯ ಕೆಲಸ ಕಾರ್ಯಗಳಿಂದ ಅಂತರ ಕಾಪಾಡಬೇಕು ಎಂದು ರೌಡಿ ಆಸಾಮಿಗಳಿಗೆ ಪೊಲೀಸ್ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಓದಿ : ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರಲ್ಲಿ ಆರು ಜನ ರೌಡಿಗಳು ಪತ್ತೆ - arms license